ಪಡುಬಿದ್ರಿ: ಕಾಪು ಕ್ಷೇತ್ರದ ಸಮಗ್ರ ಗ್ರಾಮೀಣಾಭಿವೃದ್ಧಿಗೆ ಅದಾನಿ ಸಿ.ಎಸ್.ಆರ್. ನಿಧಿ ನೀಡಿ ಕೈಜೋಡಿಸುತ್ತಿರುವುದು ಶ್ಲಾಘನೀಯ. ಪಡುಬಿದ್ರಿಯ ಯೋಜನಾಬದ್ಧ ಬೆಳವಣಿಗೆಗೆ ಯುಪಿಸಿಎಲ್ ಇನ್ನಷ್ಟು ಸಹಕರಿಸಬೇಕು. ಪಡುಬಿದ್ರಿ ಪಂಚಾಯತ್‌ನ ನೂತನ ಕಚೇರಿ ಕಟ್ಟಡದಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿ. ಎಲ್ಲ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಗ್ರಾಮಸ್ಥರಿಗೆ ನಗು ಮೊಗದ ಸೇವೆ ನೀಡಬೇಕು ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಮಾ. 12ರಂದು ಅದಾನಿ ಯುಪಿಸಿಎಲ್‌ನ 50 ಲಕ್ಷ ರೂ. ಗಳ ಸಿಎಸ್‌ಆರ್ ನಿಧಿ ಮತ್ತು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಅವರ 20 ಲಕ್ಷ ರೂ. ಅನುದಾನಗಳ ಹೊಂದಾಣಿಕೆಯೊಂದಿಗೆ 1.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪಡುಬಿದ್ರಿ ಗ್ರಾ. ಪಂ. ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲೂರು ಗ್ರಾಮದಲ್ಲಿ ಈಗಾಗಲೇ ತ್ಯಾಜ್ಯ ಸಂಗ್ರಹಣೆ ಮೂಲಕ ಗೊಬ್ಬರ ನಿರ್ವಹಣಾ ಘಟಕ ಸ್ಥಾಪಿಸಲು ಸರಕಾರ ಹಸಿರು ನಿಶಾನೆ ನೀಡಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ತ್ಯಾಜ್ಯ ವಿಲೇವಾರಿ ಮಾಡಲು ವಾಹನ ವ್ಯವಸ್ಥೆಯನ್ನು ಅದಾನಿ ಸಮೂಹ ಕಲ್ಪಿಸಬೇಕು. ಪಡುಬಿದ್ರಿಯ ಕೊಳಚೆ ನೀರು ನಿರ್ವಹಣಾ ಘಟಕಕ್ಕೂ ಯುಪಿಸಿಎಲ್ ವಿಶೇಷ ರೀತಿಯಲ್ಲಿ ಸಹಕರಿಸ ಬೇಕು ಎಂದು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು.
ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್ ಅಧ್ಯಕ್ಷತೆ ವಹಿಸಿ ಮಾತಾಡಿದರು. ಶಾಸಕರೊಂದಿಗೆ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾಡಿದ ಅದಾನಿ ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಸಾಮಾನ್ಯವಾಗಿ ಅದಾನಿ ಯುಪಿಸಿಎಲ್ ಕಂಪೆನಿ ಸಿ.ಎಸ್.ಆರ್. ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಕಾರ್ಯಗಳಾದ ರಸ್ತೆ ಅಭಿವೃದ್ಧಿ, ವಿದ್ಯುತ್ತೀಕರಣ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಆರೋಗ್ಯ ಇವುಗಳಿಗೆ ಮೀಸಲಿಟ್ಟಿದ್ದು, ಇಂದು ಪಡುಬಿದ್ರಿ ಗ್ರಾ. ಪಂ. ಬೇಡಿಕೆಯಂತೆ ಪಂಚಾಯತ್ ಕಟ್ಟಡ ನಿರ್ಮಾಣ ಮಾಡಲು ಸಿಎಸ್‌ಆರ್ ಯೋಜನೆಯಿಂದ 50 ಲಕ್ಷ ರೂ. ನೀಡಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ”ಸೋಜಾ ಮಾತನಾಡಿ, ತನ್ನ ಶಾಸಕರ ನಿಧಿಯಿಂದ 5 ಲಕ್ಷ ರೂ.ಗಳನ್ನು ನೂತನ ಪಂಚಾಯತ್ ಕಟ್ಟಡಕ್ಕಾಗಿ ನೀಡುತ್ತಿದ್ದು, ಆದಷ್ಟು ಶೀಘ್ರ ಜನತಾ ಸೇವೆಗೆ ಈ ಕಟ್ಟಡ ತೆರೆದುಕೊಳ್ಳಲಿ ಎಂದರು.
ಗ್ರಾ. ಪಂ. ಒಕ್ಕೂಟದ ಜಿಲ್ಲಾಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ, ಜಿ.ಪಂ. ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತಾಡಿದರು.
ತಾ. ಪಂ. ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್, ಪಡುಬಿದ್ರಿ ಸಮುದ್ರ ಕಿನಾರೆಯ ಅಭಿವೃದ್ಧಿ ಹೊಣೆ ಹೊತ್ತಿರುವ ಸಾಯಿರಾಧಾ ಹೆರಿಟೇಜ್‌ನ ಮನೋಹರ ಶೆಟ್ಟಿ ಕಾಪು, ಎಪಿಎಂಸಿ ಸದಸ್ಯ ನವೀನ್‌ಚಂದ್ರ ಸುವರ್ಣ, ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಕಾಪು ಪುರಸಭೆ ಉಪಾಧ್ಯಕ್ಷ ಉಸ್ಮಾನ್, ತೆಂಕ ಗ್ರಾ. ಪಂ. ಉಪಾಧ್ಯಕ್ಷ ಕಿಶೋರ್‌ಕುಮಾರ್, ಯುಪಿಸಿಎಲ್ ಎಜಿಎಂ ಗಿರೀಶ್ ನಾವಡ, ಮೊಗವೀರ ಮುಂದಾಳು ಸುಕುಮಾರ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.
ಪಡುಬಿದ್ರಿ ಗ್ರಾ. ಪಂ. ಉಪಾಧ್ಯಕ್ಷ ವೈ. ಸುಕುಮಾರ್ ಪ್ರಸ್ತಾವಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ ಸ್ವಾಮಿ ಕೆರಿ ಮಠ ಸ್ವಾಗತಿಸಿ, ವಂದಿಸಿದರು.