ಮಂಗಳೂರು: ಯುಪಿಸಿಎಲ್-ಕಾಸರಗೋಡು 400 ಕೆವಿ ವಿದ್ಯುತ್ ನಿರ್ಮಾಣ ಕಾಮಗಾರಿಗೆ ಚುರುಕು ನೀಡಲಾಗುತ್ತಿದೆ. ಭೂಸಂತ್ರಸ್ತರನ್ನು ಭೇಟಿಯಾಗಿ ಸಮರ್ಪಕ ದಾಖಲೆ ಸಂಗ್ರಹಿಸಿ, ಪರಿಹಾರ ಮೊತ್ತವನ್ನೂ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಯೋಜನೆಯ ಅನುಷ್ಠಾನಕ್ಕಿರುವ ಉಡುಪಿ ಕಾಸರಗೋಡು ಟ್ರಾನ್ಸ್‌ಮಿಷನ್ ಲಿ.(ಯುಕೆಟಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.
2019 ರಲ್ಲಿ ಯುಕೆಟಿಎಲ್ ಗುತ್ತಿಗೆಪಡೆದಿದ್ದು, 2022ರ ನವೆಂಬರ್‌ಗೆವಿದ್ಯುತ್ ಮಾರ್ಗ ಪೂರ್ಣವಾಗ ಬೇಕಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಆರು ತಿಂಗಳು ವಿಸ್ತರಿಸಲಾಗಿತ್ತು. ಕಾಸರಗೋಡು ಭಾಗದಲ್ಲಿ ಬಹುತೇಕ ಭೂಸ್ವಾಧೀನವಾಗಿದೆ ಎಂದು ಯುಕೆಟಿಎಲ್ ತಿಳಿಸಿದೆ.
ಟವರ್ ಹಾಕುವ ಹಾಗೂ ವಿದ್ಯುತ್ ಸಾಗಣೆಯ ಮಾರ್ಗವನ್ನು ರೈಟಾಫ್ ವೇ ಎಂದು ಗುರುತಿಸಲಾಗಿದೆ. ಪ್ರಸ್ತುತ ಭೂ ಸ್ವಾಧೀನ ದರವನ್ನು ಪರಿಷ್ಕರಿಸಿದ್ದು, ಟವರ್ ಹಾಕುವ ಜಾಗದ 2022-23ರ ಸಾಲಿನ ಮಾರ್ಗದರ್ಶಿ ದರದ ಶೇ.85 ರಷ್ಟು ಮೌಲ್ಯದ 4 ಪಟ್ಟು ಗ್ರಾಮೀಣ ಭಾಗ ಹಾಗೂ 3 ಪಟ್ಟು ನಗರ ಭಾಗದಲ್ಲಿ ಪರಿಹಾರ ಅಥವಾ 3 ವರ್ಷದ ವಹಿವಾಟು ದರ ಸರಾಸರಿ (ಯಾವುದು ಹೆಚ್ಚೋ ಅದನ್ನು) ನೀಡಲಾಗುತ್ತದೆ. ರೈಟಾಫ್ ವೇ ಕಾರಿಡಾರ್‌ನಲ್ಲಿ ಭೂಸ್ವಾಧೀನ ಮಾಡುವುದಿಲ್ಲ, ಆದರೆ ಮಾರ್ಗದರ್ಶಿ ದರದ ಶೇ.15 ರಷ್ಟು ಮೌಲ್ಯದ 2 ಪಟ್ಟು ದರವನ್ನು ಅಥವಾ ವಹಿವಾಟು ದರ (3 ವರ್ಷದ ಸರಾಸರಿ) ಯಾವುದು ಹೆಚ್ಚೋ ಅದನ್ನು ಕಂಪೆನಿ ನೀಡಲಿದೆ. ಈ ಭೂಮಿಯ ಮಾಲೀಕರು ತೆಂಗು, ಅಡಕೆ ಬೆಳೆಯುವಂತಿಲ್ಲ. ಬೇರೆ ಸಣ್ಣ ಗಿಡ ನೆಡಲು, ತೋಟ ಮಾಡಲು ಅಡ್ಡಿಯಿಲ್ಲ. ಮೂಡುಬಿದಿರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಸಲು ಯೋಜಿಸಲಾಗಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.
700 ಕೋ.ರೂ. ಯೋಜನೆ
700 ಕೋಟಿ ರೂ. ನ ಯೋಜನೆಯಲ್ಲಿ 500 ಕೋಟಿ ರೂ. ವ್ಯಯಿಸಿರುವ ಸ್ಟಲೈಟ್ ಪವರ್‌ನವರು ನಂದಿಕೂರಿನಲ್ಲಿ ಬೇಸ್ ಹಾಗೂ ಕಾಸರಗೋಡಿನಲ್ಲಿ ಸಬ್‌ಸ್ಟೇಷನ್ ಅನ್ನು ಪೂರ್ಣಗೊಳಿಸಿದ್ದಾರೆ. ಕರ್ನಾಟಕದಲ್ಲಿ 68 ಮತ್ತು ಕೇರಳದಲ್ಲಿ 40 ಕಿಮೀ ಮಾರ್ಗ ಆಗಬೇಕಿದ್ದು, ಕೇರಳ ಭಾಗದಲ್ಲಿ ಸಾಗಣೆ ಗೋಪುರದ ಬೇಸ್ ನಿರ್ಮಿಸಲಾಗಿದೆ. ಉಡುಪಿಯ 16 ಕಡೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಮಂಗಳೂರು, ಮೂಡುಬಿದಿರೆ, ಮೂಲ್ಕಿ ತಾಲೂಕಿನಲ್ಲಿ 161 ಕಡೆ ಬೇಸ್ ನಿರ್ಮಿಸಬೇಕಿದೆ.
ರಾಷ್ಟ್ರದಲ್ಲಿ ವಿದ್ಯುತ್ ಗ್ರಿಡ್ ಬಲಪಡಿಸುವ ಯೋಜನೆ ಇದು. ಕರ್ನಾಟಕಕ್ಕೂ ಶೇ.40 ರಷ್ಟು ಪ್ರಯೋಜನ ಸಿಗಲಿದೆ. ವಿದ್ಯುತ್ ಸಾಗಣೆಯಿಂದ ಯಾರಿಗೂ ಸಮಸ್ಯೆಯಿಲ್ಲ. ಯೋಜನೆಯ ಮಾರ್ಗನಕ್ಷೆ ಎಲ್ಲವನ್ನೂ ಆರ್‌ಇಸಿ ಕಂಪೆನಿ ಅಂತಿಮಗೊಳಿಸಿದ್ದು, ನಾವು ಮಾರ್ಗವನ್ನು ನಿರ್ಮಿಸುತ್ತಿದ್ದೇವೆ ಎಂದು ಕಂಪೆನಿಯ ಯೋಜನಾ ನಿರ್ದೇಶಕ ಕಮಲೇಶ್ ಗರ್ಗ್ ತಿಳಿಸಿದ್ದಾರೆ.