Advertisement

ಉಪನಿಷತ್ತುಗಳ ಹತ್ತಿರದಿಂದ

06:29 PM Jun 15, 2019 | mahesh |

ನಾವು ಕಠೊಪನಿಷತ್ತನ್ನು ನೋಡುತ್ತಿದ್ದೇವೆ. ತಂದೆ ವಾಜಶ್ರವಸ ಮತ್ತು ಮಗ ನಚಿಕೇತ ಇವರ ಮುಖಾಮುಖೀಯನ್ನು. ತಂದೆ-ಮಗನ ಈ ಮುಖಾಮುಖೀ ಉಪನಿಷತ್ಕಾಲದಷ್ಟು ಹಳೆಯದು. ಅಥವಾ ಈ ಮುಖಾಮುಖೀಯಲ್ಲಿಯೇ ಉಪನಿಷತ್ತೂಂದು ಕಣ್ತೆರೆಯಿತು! ತಂದೆಯನ್ನು ಹಳಬನೆನ್ನಬಹುದು. ಮಗನನ್ನು ಆಧುನಿಕ-ನೂತನನೆನ್ನಬಹುದು. ಆಶ್ಚರ್ಯವಾಗುತ್ತದೆ: ವೇದಗಳ ಮೊದಲ ನುಡಿಯಲ್ಲಿಯೇ “ಪೂರ್ವಿಕ’ ಮತ್ತು “ನೂತನ’ ಎಂಬೆರಡು ಪದಗಳಿವೆ! ಅಗ್ನಿ ಃ ಪೂರ್ವೇಭಿಃ ಋಷಿಭಿಃ ಈಡ್ಯಃ ನೂತನೈಃ ಉತ- ಎಂಬ ಮಾತು! ಅಗ್ನಿಯು ನಮ್ಮ ಹಿಂದಣ ಋಷಿಗಳಿಂದ ಹೇಗೆ ಸ್ತುತ್ಯನಾಗಿರುವನೋ ಹಾಗೆಯೇ ನೂತನರಿಂದಲೂ ಅಂದರೆ ಇಂದಿನವರಿಂದಲೂ ಸ್ತುತ್ಯನಾಗುವುದಕ್ಕೆ ಯೋಗ್ಯನಿದ್ದಾನೆ ಎಂಬ ಆಶಂಸೆ ಅಲ್ಲಿದೆ. ಹಿಂದಿನಿಂದ ನಡೆದುಕೊಂಡು ಬಂದ ಸಂಸ್ಕೃತಿಯನ್ನು ಮುಂದುವರೆಸುವ ಬಯಕೆ, ಒಂದು ಬಗೆಯ ಸಾತತ್ಯದ ಬಯಕೆ ಅಥವಾ ಇಲ್ಲಿನ ಬದುಕಿನಲ್ಲಿ ಒಂದು ಸಾತತ್ಯ- ಒಂದು ನಿರಂತರತೆ ಇದೆ ಎಂಬ ಗ್ರಹಿಕೆ ಈ ಮಾತಿನಲ್ಲಿದೆ. ಕನ್ನಡದಲ್ಲಿ ನಾವು ಆಪ್ತತೆ, ಒಂದು ಕ್ರಮಬದ್ಧತೆ ಎನ್ನುವ ಅರ್ಥದಲ್ಲಿ “ಅಚ್ಚುಮೆಚ್ಚು’, “ಅಚುಕಟ್ಟುತನ’ ಎಂದು ಬಳಸುವೆವು. ಈ ಪದಗಳಲ್ಲಿನ “ಅಚ್ಚು’ ಎಂದರೇನು? “ಅಚ್ಚು’ ಎಂದರೆ ಪಡಿಯಚ್ಚು! “ಅಚ್ಚು’ ಎಂದರೆ ನಮಗೆ ಪರಿಚಿತವಾಗಿರುವ ಒಂದು ಮುದ್ರೆ, ಭಾವದ ಒಂದು ಚಹರೆ, ಭಾವದ ಒಂದು ಮೊಹರು. ಈ “ಅಚ್ಚು’ ಹಿಂದಿನದು. ಹಿಂದಿನಿಂದಲೂ ಬಂದದ್ದು. ಪೂರ್ವಿಕರಿಂದ ಬಂದದ್ದು. ಆದುದರಿಂದಲೇ ಈ ಅಚ್ಚು ನಮಗೆ ಮೆಚ್ಚು. ಹಿಂದಿನಿಂದಲೂ ಬಂದದ್ದಾಗಿ ಇದು ಮುಂದುವರಿಯುವುದು ಸಹಜವಾಗಿದೆ. ಸುಲಭವೂ ಆಗಿದೆ. ಆದುದರಿಂದಲೇ “ಅಚ್ಚುಕಟ್ಟಾ’ಗಿದೆ! ಹೀಗೆ ಬದುಕಿನಲ್ಲಿ ಪ್ರತಿಫ‌ಲನಗಳು ನಡೆಯುತ್ತ ಹೋಗುತ್ತವೆ; ಈ ಅರ್ಥದಲ್ಲಿ ಒಂದು ನಿರಂತರತೆ ಇಲ್ಲಿದೆ ಎಂಬ ಗ್ರಹಿಕೆ ವೇದದ ಈ ಮೊದಲ ನುಡಿಯಲ್ಲಿದೆ. ಅಲ್ಲದೆ, ನೂತನರೂ ಋಷಿಗಳೇ- ಋಷಿಗಳಾಗಬಲ್ಲರು- ಋಷಿತ್ವವು ಯಾವುದೋ ಒಂದು ಕಾಲಕ್ಕೆ ಸಂಬಂಧಪಟ್ಟ ಸಂಗತಿಯಲ್ಲ- ಅದು “ಕಾಣೆ’ಗೆ ಸಂಬಂಧಿಸಿದ ಸಂಗತಿ ಮತ್ತು ಕಾಣ್ಕೆಯು ಎಲ್ಲ ಕಾಲದಲ್ಲೂ- ಯಾರಲ್ಲೂ-ನಡೆಯಬಹುದಾದ ಅಂತರಂಗದ ವಿದ್ಯಮಾನ ಎಂಬ ವಿಚಾರಗಳೆಲ್ಲ ಈ ಒಂದು ಮಾತಿನಲ್ಲಿ ಅಡಗಿವೆ. ಇದು ವೇದದ ಮೊದಲ ನುಡಿ ಹೌದೋ ಅಲ್ಲವೋ. ಆದರೆ ಮೊದಲ ನುಡಿಯಾಗಿ ಇದನ್ನು ವೇದವ್ಯಾಸರು ಸಂಕಲಿಸಿದ್ದಾರೆ. ಹಾಗೆ ಸಂಕಲಿಸಿದ್ದರಲ್ಲಿ ವ್ಯಾಸರ ಮನಸ್ಸು ತಿಳಿದುಬರುತ್ತದೆ. ಆ ಮಾತು ಬೇರೆ.

Advertisement

ಉಪನಿಷತ್ತಿನ ಸೂಕ್ಷ್ಮ ಎಚ್ಚರವು ಬದುಕಿನ ಸಾತತ್ಯವನ್ನು ಇನ್ನೊಂದು ರೀತಿಯಲ್ಲಿ ಗ್ರಹಿಸಿತು. ಅದು ವೇದದ ನುಡಿಯಲ್ಲಿರುವ “ನೂತನ’ ಎಂಬ ಪದವನ್ನು ಆಳವಾಗಿ ನೋಡಿದ್ದಿರಬೇಕು. ನೂತನ ಎಂದರೆ ಹೊಸದು. ನೂತನ ಎಂದರೆ ಹೊಸಬ. “ಪೂರ್ವಿಕ’ನಿಂದಲೇ ಬಂದವನಾಗಿದ್ದರೂ ಇವನು ಹೊಸಬ! ಎಂದರೆ ಹೊಸದಾಗುವಿಕೆಯೇ ಸಾತತ್ಯದ ತಿರುಳು ಎಂದು ಉಪನಿಷತ್ತು ಅದ್ಭುತವಾಗಿ ಗ್ರಹಿಸಿತು. ಹೊಸತಾಗದಿದ್ದರೆ ಎಲ್ಲವೂ ಜಡಗೊಳ್ಳುತ್ತ ಹೋಗುತ್ತದೆ. ಬೆಂಕಿಯ ಜಾಗೆಯಲ್ಲಿ ಹೊಗೆ ಆಕ್ರಮಿಸುತ್ತದೆ. ಅದು ಕರ್ಮಕಾಂಡದ ಪಾಡು ಎಂದೂ ಗ್ರಹಿಸಿತು. ಯಜ್ಞಯಾಗಗಳನ್ನು ನಿರಂತರವಾಗಿ ಮಾಡಿ ಮಾಡಿ ಹೊಗೆ ಕುಡಿದದ್ದಷ್ಟು ಬಂತು, “ಅರಿವು’ ಮೂಡದೆ ಹೋಯಿತು- ಎಂದು ಆನಂತರದ ವಾಗ್ಮಿಯವಾದ ಭಾಗವತದಲ್ಲಿ ಹೇಳಿದ್ದುಂಟು. ಇದು ಜಡಗೊಂಡ ಆಚರಣೆಗಳ ಸ್ಥಿತಿಯನ್ನು ಸೂಚಿಸುವ ಮಾತು. ಅಗ್ನಿಯನ್ನು ಮತ್ತೆ ಮತ್ತೆ ಕೆದಕುತ್ತ ಇರಬೇಕಾಗುತ್ತದೆ- ಅದು ಜ್ವಲಿಸಬೇಕಾದರೆ! ಇದೇ ಕಠೊಪನಿಷತ್ತಿನಲ್ಲಿ- ಮುಂದೆ ನಚಿಕೇತನು ಯಮನನ್ನು ಭೇಟಿಯಾಗಿ ಕೇಳುವ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ “ಅಗ್ನಿಚಯನ’ವನ್ನೇ ಕುರಿತದ್ದಾಗಿರುವುದು ಅರ್ಥಪೂರ್ಣವಾಗಿದೆ. ಪ್ರಶ್ನೆಗೆ ಉತ್ತರವಾಗಿ ಯಮನು ಉಪದೇಶಿಸುವ ಅಗ್ನಿ ವಿದ್ಯೆಯು “ನಾಚಿಕೇತಾಗ್ನಿ’ ಎಂದೇ ಪ್ರಸಿದ್ಧವಾಗಲಿ ಎಂಬ ಮಾತು ಬಂದಿದೆ. ಅಂದರೆ ಗುರುವಿನ ಹೆಸರಿನಲ್ಲಿ ಅಲ್ಲ ; ಶಿಷ್ಯನ ಹೆಸರಿನಲ್ಲಿ ; ಗ್ರಹಿಸಿದವನ ಹೆಸರಿನಲ್ಲಿ. ಗ್ರಹಿಸುವುದೇ ಮುಖ್ಯ. ಅಗ್ನಿ ಃ ಪೂರ್ವೇಭಿಃ ಋಷಿಭಿಃ ಈಡ್ಯಃ ನೂತನೈಃ ಉತ ಎಂಬ ವೇದದ ನುಡಿ ಮತ್ತೆ ಇಲ್ಲಿ ನೆನಪಾಗುತ್ತದೆ.

ಆದರೆ, ಹೊಸಬನಾಗುವುದೆಂದರೆ ಅದೊಂದು ಜೀವನ್ಮರಣ ಪ್ರಶ್ನೆ ಎಂದು ಉಪನಿಷತ್ತು ಗ್ರಹಿಸಿದ್ದು ಮಾತ್ರ ವಿಶೇಷವಾಗಿದೆ. ನಮ್ಮ ಹೊಸ ಹುಟ್ಟಿಗೂ ನಮ್ಮ ಪೂರ್ವಾಗ್ರಹಗಳು ಸಾಯುವುದಕ್ಕೂ ಹತ್ತಿರದ ಸಂಬಂಧವಿದೆ. ನಮ್ಮೊಳಗೇ ಇರುವ ಆದರೆ ಸುಪ್ತವಾಗಿರುವ ಶ್ರದ್ಧೆಯು ಎಚ್ಚರಗೊಳ್ಳುವುದೆಂದರೆ ಅದು ಹೊಸಹುಟ್ಟಿಗೆ ಸಿದ್ಧವಾದಂತೆ; ಮತ್ತು ಜೀವನ್ಮರಣ ಪ್ರಶ್ನೆಯೊಂದನ್ನು ಶ್ರದ್ಧೆಯ ಬಲವೊಂದಲ್ಲದೆ ಬೇರೆ ಇನ್ನಾವ ಬಲವೂ ಇಲ್ಲದೆ ಎದುರಿಸಿದಂತೆ. ನಚಿಕೇತನ ಪ್ರಕರಣದಲ್ಲಿ ಹಾಗೆಯೇ ನಡೆಯಿತು. ಉಪನಿಷತ್ತು ಇದನ್ನು ಸೂಚಿಸದೆ ಇರುವಂತಿಲ್ಲ.

ನಿನ್ನನ್ನು ಯಮನಿಗೆ ಕೊಟ್ಟು ಬಿಟ್ಟಿದ್ದೇನೆ !
ಕಣ್ಣಮುಂದೆ ವಿಪರ್ಯಾಸವೊಂದು ನಡೆಯುತ್ತಿದ್ದಾಗ- ದಾನ ಕೊಡಬಾರದ ಮುದಿ ಹಸುಗಳನ್ನು ದಾನಕೊಡುತ್ತಿದ್ದಾಗ ತನ್ನೊಳಗೆ ಹುಟ್ಟಿಕೊಂಡ ಅಪೂರ್ವವಾದ ಪ್ರಶ್ನೆಯೊಂದನ್ನು- ತಂದೆಯೇ ನನ್ನನ್ನು ಯಾರಿಗೆ ಕೊಡುವೆ ಎಂಬ ಪ್ರಶ್ನೆಯನ್ನು- ನಚಿಕೇತ ಕೇಳಿದನಂತೆ. ಉತ್ತರವನ್ನು ಕೇಳಿದ್ದಲ್ಲದೆ ಹುಡುಗನ ಪ್ರಶ್ನೆ ಕೊನೆಗಾಣದು. ಆದರೆ, ವ್ಯಾವಹಾರಿಕವಾಗಿ ಈ ಪ್ರಶ್ನೆಯೊಂದು ಅತಿಪ್ರಸಂಗ. ಮತ್ತೆ ಮತ್ತೆ ಕೇಳಿದರೆ ಸಿಟ್ಟಿಗೇಳಿಸುವ ಪ್ರಸಂಗ. ಹಾಗೆಯೇ ನಡೆದುಬಿಟ್ಟಿತು. ತಾನು ಮಾಡುತ್ತಿರುವುದು ತಪ್ಪೆಂದು ಪರೋಕ್ಷವಾಗಿ ಸೂಚಿಸುವ ಈ ಪ್ರಶ್ನೆಯಿಂದ ತಂದೆ ವಾಜಶ್ರವಸ ಅದಾಗಲೇ ವ್ಯಗ್ರನಾಗಿದ್ದ. ಮಗ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುತ್ತಲೇ ಇದ್ದ. ತಂದೆಗೆ ಸೈರಣೆ ಸಹ ತಪ್ಪಿಹೋಯಿತು. ಕೋಪ ಉರಿಯಿತು. ನಿನ್ನನ್ನು ಯಮನಿಗೆ ಕೊಟ್ಟು ಬಿಟ್ಟಿದ್ದೇನೆ- ಮೃತ್ಯವೇ ತ್ವಾಂ ದದಾಮಿ- ಎಂದುಬಿಟ್ಟ. ಎಡವಿದ ಕಾಲು ಇನ್ನೊಮ್ಮೆ ಎಡವಿತು. ತಪ್ಪಿನ ಮೇಲೆ ತಪ್ಪು . ಮಗನ ಮೇಲೆ ತಂದೆಯ ಅಧಿಕಾರ ಅವನಿಗೆ ಗೊತ್ತಿಲ್ಲದೇ ಮುಗಿದು ಹೋಯಿತು. ಅಧಿಕಾರ ಚಲಾಯಿಸಿದ್ದರಿಂದಲೇ ಅಧಿಕಾರ ಮುಗಿದುಹೋಯಿತು!

ಲೋಕದಲ್ಲಿ ತಂದೆ-ಮಗನ ಸಂಬಂಧ ಎಂದರೆ ಎರಡು ಅಹಂಕಾರಗಳ ಘರ್ಷಣೆ. ಆದುದರಿಂದ ತಂದೆ-ಮಗ ಇಬ್ಬರ ಪರಿಭಾಷೆಗಳೂ ಒಂದೇ ಬಗೆಯಾಗಿರುತ್ತವೆ. ತನ್ನ ಮಾತು ನಡೆಯಬೇಕೆನ್ನುವುದು ಇಬ್ಬರದೂ ಆಗ್ರಹ, ಈ ಅರ್ಥದಲ್ಲಿ ಪೂರ್ವಿಕ-ನೂತನ ಈರ್ವರೂ ಒಂದೇ. ಅವರನ್ನು ಪೂರ್ವಿಕ- ನೂತನರೆನ್ನುವುದೇ ಹುಸಿಮಾತು. ಇದು ಲೋಕದೆಲ್ಲೆಡೆ ಕಾಣುತ್ತಿರುವ ಸ್ಥಿತಿ. ಇದು ಜಡಗೊಂಡ ಸ್ಥಿತಿ. ಉಪನಿಷತ್ತಿಗೆ ಈ ಜಡ ಸಂಘರ್ಷದಲ್ಲಿ ಯಾವ ಕುತೂಹಲವೂ ಇಲ್ಲ. ಆದರೆ, ಅದೊಂದು ಹೇಳಲಾಗದ ರೀತಿಯಲ್ಲಿ ತಂದೆ-ಮಗ ಸಂಘರ್ಷದಲ್ಲಿ ಉಪನಿಷತ್ತಿಗೆ ಸೂಕ್ಷ್ಮವಾದ ಒಂದು ಆಸಕ್ತಿ ಇದೆ. ಈ ಸಂಘರ್ಷದಲ್ಲಿ ಹೊಸ ಪರಿಭಾಷೆ ಕೇಳಿ ಬರುತ್ತಿದೆಯೆ ಎಂದು ಮಾತ್ರ ಅದಕ್ಕೆ ಆಸಕ್ತಿ. ಈ ಕುರಿತು ಮಾತ್ರ ತೀವ್ರವಾದ ಆಸಕ್ತಿ. ಯಾವಾಗ ನನ್ನನ್ನು ಯಾರಿಗೆ ಕೊಡುತ್ತೀಯೆ ಎಂಬ ಪ್ರಶ್ನೆ ನಚಿಕೇತನ ಮುಖದಿಂದ ಕೇಳಿಬಂತು- ಈ ಒಂದು ಮಾತಿಗಾಗಿ ಬಹುಕಾಲ ಕಾದುಕೊಂಡಿದ್ದಂತೆ ಅಲ್ಲಿ ಉಪನಿಷತ್ತು ಅರಳಿಕೊಂಡಿತು. ಇದು ಹೊಸ ಪರಿಭಾಷೆ !

Advertisement

ಇಲ್ಲಿ ನಡೆಯುತ್ತಿರುವುದು ಎರಡು ಅಹಂಕಾರಗಳ ನಡುವಣ ಸಂಘರ್ಷವಲ್ಲ. ಇದು ಅಹಂಕಾರ ಮತ್ತು ಶ್ರದ್ಧೆಗಳ ನಡುವಣ ಸಂಘರ್ಷ. ಇದನ್ನು ಸಂಘರ್ಷವೆನ್ನುವುದೂ ಸರಿಯಲ್ಲ. ಮತ್ತೆ ಯಾವ ಪದ? ಅಹಂಕಾರಕ್ಕೇನೋ ಎಲ್ಲೆಲ್ಲೂ ಸಂಘರ್ಷವೇ ಕಾಣಿಸುತ್ತದೆ. ಸಂಘರ್ಷವಿಲ್ಲದೆ ಅದು ಇರಲಾರದೇನೋ! ಆದರೆ ಶ್ರದ್ಧೆಯು ಅಹಂಕಾರಕ್ಕಿಂತ ಗುಣಾತ್ಮಕವಾಗಿ ಬೇರೆಯೇ ಆದ, “ಪರ’ದ ಅರಿವಿನಲ್ಲಿ ಬಾಳುವ ಅಸ್ಮಿತೆಯಾಗಿದೆ. ತನ್ನನ್ನು ಇತರರಿಂದ, ಇತರರನ್ನು ತನ್ನಿಂದ ಬೇರ್ಪಡಿಸುವುದೇ ಅಹಂಕಾರದ ಗುಣವಾದರೆ- ಇದು “ಇಹ’ದ ಗುಣ- ಒಳಗೊಳ್ಳುವುದು; ಇಹವನ್ನೂ ಒಳಗೊಳ್ಳುವುದು “ಪರ’ದ ಗುಣ. ಇದು “ಶ್ರದ್ಧೆ’ಯ ಗುಣ. ಆದುದರಿಂದ ಶ್ರದ್ಧೆ-ಅಹಂಕಾರಗಳ ನಡುವಣ ಸಂಬಂಧವೆಂದರೆ ಅದು ಅಹಂಕಾರದ ದೃಷ್ಟಿಯಿಂದ ನೋಡಿದರೆ ಸಂಘರ್ಷ. ಶ್ರದ್ಧೆಯ ದೃಷ್ಟಿಯಿಂದ ನೋಡಿದರೆ ಒಳಗೊಳ್ಳುವ ಸಂಕಟ !

ನಾನು ನಿನ್ನವನು, ನನ್ನನ್ನು ಏನು ಬೇಕಾದರೂ ಮಾಡು, ಹೇಗೆ ಬೇಕಾದರೂ ಬಳಸಿಕೋ ಎನ್ನುವ ಆರ್ತವಾದ ಮಾತು- ಒಳಗೊಳ್ಳುವ ಮಾತಾಗಿದೆ. ದೇವರಲ್ಲಿ ಭಕ್ತನಾಡುವ ಮಾತಿನಂತಿದೆ! ಅಹಂಕಾರವನ್ನು ಕೆರಳಿಸುವ ಮಾತುಗಳಲ್ಲ- ಅಹಂಕಾರವನ್ನು ಎಚ್ಚರಿಸುವ ಮಾತುಗಳಾಗಿವೆ! ಲೋಕದಲ್ಲಿ ನಾವು ಕೇಳಿರುವಂತೆ ಉಪದೇಶಿಸುವ, ತಿದ್ದುವ ಮಾತುಗಳಲ್ಲ. ತಂದೆಗಾಗಿ ನಿಜವಾಗಿ ನೊಂದ ಮಾತುಗಳು! ಲೋಕವನ್ನು ಕಂಡು ನೋವುಂಡ ಮಾತುಗಳು! ಇದು ಬೇರೆಯೇ ಪರಿಭಾಷೆ. ಇಂಥ ಮಾತುಗಳು ಭಾರತೀಯ ವಾಗ್ಮಿಯದಲ್ಲಿ ಮೊದಲ ಬಾರಿಗೆ ಕೇಳಿಸಿದ ದಾಖಲೆ ಇದು.

ರೇಖಾಚಿತ್ರ : ಎಂ. ಎಸ್‌. ಮೂರ್ತಿ
ಲಕ್ಷ್ಮೀಶ ತೋಳ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next