Advertisement

ಎಲ್ಲವೂ ಒಟ್ಟಿಗೇ ಇದೆ ಎಂದು ಅರಿವಾಗುವುದಕ್ಕೆ ಅದನ್ನು ವಿಂಗಡಿಸಿಯೂ ನೋಡಬೇಕಾಗುತ್ತದೆ !

09:53 PM Aug 24, 2019 | mahesh |

ಬದುಕು ಕಟ್ಟುವುದು ಎಂಬ ಮಾತನ್ನು ಕೇಳುತ್ತಿರುತ್ತೇವೆ. ಕಟ್ಟುವುದು ಎಂದರೆ ಒಂದು ಹೊಂದಿಕೆಯಲ್ಲಿ ಎಲ್ಲವನ್ನೂ ಜೋಡಿಸುವ ಅನುಭವ. ಹಕ್ಕಿಯೊಂದು ಕಸ-ಕಡ್ಡಿ-ಎಲೆ-ಜೊಂಡು-ತರಗೆಲೆಗಳಿಂದ ಮೆತ್ತಗಿನ ಗೂಡು ಹೆಣೆಯುವಂತೆ. ಕಟ್ಟುವುದೆಂದರೆ ಅನುಭವಗಳ ಸಾಂಗತ್ಯ ಎನ್ನಬಹುದು. ಕಟ್ಟುವ ಮನಸ್ಸಿಗೆ ಏನೆಲ್ಲವನ್ನೂ ತನಗೆ ಬೇಕಾದಂತೆ ಹೇಗೆ ಬಳಸಿಕೊಳ್ಳಬಹುದೆನ್ನುವ ಚಿಂತೆ ಸದಾ ಜಾಗೃತವಿರುತ್ತದೆ. ಬೇಕಾದಂತೆ ಬಳಸಿಕೊಳ್ಳಲಾಗದಿರುವ ಸಂಗತಿಗಳನ್ನು ಇಂಥ ಮನಸ್ಸು “ವಿ-ಸಂಗತಿ’ ಎಂದು ಎಣಿಸುತ್ತದೆ. “ವಿ-ಸಂಗತಿ’ಗಳು ಕಟ್ಟುವ ಮನಸ್ಸಿಗೆ ವಿರೋಧದ ಜಾಗಗಳು. ನಮ್ಮ ಅನುಭವದಲ್ಲಿಯೇ ನೋಡಿ. ಯಾವುದೇ ಒಂದು ವಿಚಾರವನ್ನು ಕೇಳಿದಾಗಲೂ ಅದರಲ್ಲಿ ಪರಸ್ಪರ ವಿರೋಧಗಳು ಕಂಡುಬಂದರೆ ಅದು ನಮಗೆ ಮೆಚ್ಚಾಗದಿರುವುದು ಏಕೆ? ಅಥವಾ ಆ ವಿಚಾರದಲ್ಲಿ ಪರಸ್ಪರ ವಿರೋಧಗಳಿವೆಯೆ ಎಂದು ನಾವು ಕಣ್ಣಲ್ಲಿ ಕಣ್ಣಿಟ್ಟು ಹುಡುಕುವುದೇಕೆ? ನಮ್ಮ ವಿಚಾರಗಳಲ್ಲೂ ಪರಸ್ಪರ ವಿರೋಧಬಾರದಂತೆ ನಾವು ಎಚ್ಚರವಾಗಿರುವುದೇಕೆ? ಇದು ಯಾವುದನ್ನು ಸೂಚಿಸುತ್ತದೆ? ಅಂದರೆ ಯಾವುದೋ ಒಂದು ಬಗೆಯ ಸಮನ್ವಯಕ್ಕೆ ನಾವು ನಮ್ಮಲ್ಲೇ ಪ್ರಯತ್ನಿಸುತ್ತಿರುತ್ತೇವೆ. ನಮ್ಮ ಸಮನ್ವಯದ ಪ್ರಯತ್ನಕ್ಕೆ ಹೊಂದದ ಸಂಗತಿಗಳು ನಮ್ಮನ್ನು ದುಃಖಕ್ಕೆ ಈಡುಮಾಡುವವು. ಮುಖ್ಯವಾದ ಮಾತೆಂದರೆ- ಇದ್ದುದು ಇದ್ದಂತೆ ನಾವು ಯಾವುದನ್ನೂ ನೋಡಲಾರೆವು. ಮತ್ತು ಹಾಗೆ ನೋಡಲು ಬಯಸೆವು ಕೂಡ. ಇದು ನಮ್ಮ ಮಿತಿ. ಪ್ರಕೃತಿಯಾದರೋ ಈ ಮಿತಿಯೊಳಗೇ ನಮ್ಮೊಡನೆ ಆಟವಾಡುತ್ತಿರುವಂತೆಯೂ ಅನ್ನಿಸುತ್ತದೆ. ಆದರೆ, ಹೇಗೆ ಇದೆಯೋ ಹಾಗೆ ನೋಡಲು ಸಾಧ್ಯವಾಗದಿರುವುದು ನಮ್ಮ ಮಿತಿ ಎಂದೂ, ಈ ಮಿತಿಯನ್ನು ಮೀರಲೇಬೇಕಾಗಿದೆ ಎಂದೂ ಸೂಚಿಸದೇ ಇರುವುದು ಕೂಡ ಪ್ರಕೃತಿಗೆ ಸಾಧ್ಯವಿಲ್ಲ. ಸೂಕ್ಷ್ಮವಾಗಿ ಅದು ಸೂಚಿಸಿಯೇ ಸೂಚಿಸುತ್ತದೆ. ಅದು ಯಾವುದೇ ತೀವ್ರವಾದ ಅನುಭವವನ್ನು ಉಂಟುಮಾಡಿ, ಆ ಮೂಲಕ, ಬದುಕಿನ ಅನುಭವಗಳಲ್ಲಿ ಹಾಸುಹೊಕ್ಕಾಗಿ ಇರುವ, ಆದರೆ ಗಮನಕ್ಕೆ ಬಾರದೆ ಉಳಿಯುವ, ಸಾವಿನ ಅನುಭವವನ್ನು ಹೊಳೆಯಿಸಿಯೇ ಹೊಳೆಯಿಸುತ್ತದೆ!

Advertisement

ಯಾವುದೇ ಕೆತ್ತನೆಯ ಅನುಭವವನ್ನು ನೋಡಿ. ಕೆತ್ತುತ್ತ, ಕೆತ್ತುತ್ತ, ಯಾವುದೋ ರೂಪವನ್ನು ರೂಪಿಸುತ್ತ, ಆ ಅನುಭವದಲ್ಲಿಯೇ “ಮುರಿಯುವ’ ಹೊಳಹುಗಳೂ ದೊರೆಕೊಳ್ಳುತ್ತವೆ! ಕೆತ್ತನೆ ಮತ್ತು ಭಂಜನೆ ಒಂದೇ ಸತ್ಯದ ಎರಡು ಮುಖಗಳು! ಕಲ್ಲು ಹೇಗಿದೆಯೋ ಅದನ್ನು ನಮಗೆ ಬೇಕಾದಂತೆ ಭಂಗಿಸದೆ, ಮುರಿಯದೆ, ನಮ್ಮ ಇಷ್ಟದ ಮೂರ್ತಿಯನ್ನು ಮಾಡುವುದಾದರೂ ಸಾಧ್ಯವೆ? ಕಲ್ಲಿನೊಡನೇ ಈ ಅನುಭವದ ಬಗ್ಗೆ ಕೇಳಿದರೆ ಅದೇನು ಹೇಳೀತು- ತನ್ನನ್ನು ಮುರಿದರು ಎಂದಲ್ಲದೆ! ಬಸವಣ್ಣ , “ಸ್ಥಾವರಕ್ಕೆ ಅಳಿವುಂಟು’ ಎನ್ನುವಾಗ ಕೆತ್ತನೆಯಲ್ಲಿರುವ ಭಂಜನೆಯ ಗುಣ ಅವರ ಮನಸ್ಸಿಗೆ ಹೊಳೆದಿರಬೇಕು! ಅಂದರೆ ತೀವ್ರವಾಗಿ-ಭಾವತೀವ್ರವಾಗಿ-ಬದುಕುವಾಗ, ಅಂಥ ಬದುಕು ಸೂಕ್ಷ್ಮವಾಗಿ, ಆ ಉತ್ಕಟತೆಯಲ್ಲಿ ಸಾವಿನ ಹೊಳಹುಗಳನ್ನು ನೀಡಬಲ್ಲುದು- ಸಾವೆನ್ನುವುದು ತೀವ್ರವಾದ ಅನುಭವವೇ ಆಗಿರುವುದರಿಂದ.

ಗೀತೆಯಲ್ಲಿ ಕೃಷ್ಣನಾಡಿದ ಒಂದು ಮಾತು ಹೀಗಿದೆ. ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ- ಎಂಬ ಮಾತು. ದಾರದಲ್ಲಿ ಮಣಿಗಳ ಗುಂಪು ಹೆಣೆದುಕೊಂಡಂತೆ ನನ್ನಲ್ಲಿ ಎಲ್ಲವೂ ಹೆಣೆದುಕೊಂಡಿದೆ ಎಂಬರ್ಥದ ಮಾತು. “ಸರ್ವಂ’- ಏನೆಲ್ಲವೂ- ಎಂದರೇನು? ಎಲ್ಲವೂ ಎಂದರೆ ಇಲ್ಲಿ- ಈ ಲೋಕದಲ್ಲಿ- ಪರಸ್ಪರ ವಿರುದ್ಧವಾಗಿ ಕಾಣಿಸಿಕೊಳ್ಳುವ, ಆದುದರಿಂದ ಇವುಗಳ ಒಳಗೆ ಸಾಂಗತ್ಯವಿಲ್ಲ, ಪರಸ್ಪರ “ವಿ-ಸಂಗತಿ’ ಇದೆ ಎಂದು ಭಾಸವಾಗುವ ಎಲ್ಲವೂ, ತನ್ನಲ್ಲಿ- ಕೃಷ್ಣನಲ್ಲಿ ಯಾವುದೇ ವಿಸಂಗತಿ ಇಲ್ಲದೆ ಹೆಣೆದುಕೊಂಡಿದೆ- ಎಂದು. ಕೃಷ್ಣನೆಂಬ ದಾರದಲ್ಲಿ ಹೆಣೆಯಲಾಗದ ಮಣಿಗಳೇ ಇಲ್ಲ ಎಂದು. ಹೆಣೆಯಲಾಗದೇ ಇರುವುದೆಂಬುದೇ ಇಲ್ಲ- ಎಂದು. ಇದನ್ನು “ಮಹಿಮೆ’ ಎನ್ನುವರು. ಪರಸ್ಪರ ವಿರೋಧಗಳನ್ನು ವಿರೋಧವಿಲ್ಲದಂತೆ ತನ್ನಲ್ಲಿ ಅನುಭವಿಸುವುದೇ- “ಮಹಿಮೆ’. ಇದೇ “ದೇವರ ಮಹಿಮೆ’! ಅಂದಾಗ ಹೇಗಿದೆಯೋ ಹಾಗೆ ನೋಡಲಾಗದ ಮನುಜರಿಗೆ ಸಹಜವೆನ್ನಿಸುವ ಮಿತಿಯನ್ನು- ಮೀರುವ ನೆಲೆಗಳನ್ನು ಕೂಡ ಪ್ರಕೃತಿ ಸೂಚಿಸಲೇಬೇಕು; ಸೂಚಿಸುತ್ತದೆ ಎಂದಾಯಿತು. ಹಾಗೆ ಸೂಚಿಸುವಾಗಲೂ, ಮನುಜರ ಪಾಡನ್ನು ಅದೊಂದು ಬಗೆಯ ಅನುಕಂಪದಿಂದ ಅದು ಗಮನಿಸುತ್ತದೆ ಎನ್ನುವುದು- ಹತ್ತಿರ ಹತ್ತಿರ ಕೂತು ಒಳಮನಸ್ಸನ್ನು ಬಿಚ್ಚಿಡುವ ಉಪನಿಷತ್ತಿನ ನೆಲೆಯೂ ಆಗಿದೆ.

ತನ್ನಲ್ಲಿ ಪ್ರಸನ್ನನಾಗಿರುವ ಯಮನಲ್ಲಿ ನಚಿಕೇತನು ಎರಡನೆಯ ವರವನ್ನು ಕೇಳಿದ ವಿಷಯ ಈ ಹಿಂದೆ ಬಂದಿತ್ತು. ಆ ವರವಾದರೋ “ಅಗ್ನಿವಿದ್ಯೆ’ಯ ಕುರಿತಾಗಿತ್ತು. ನಮ್ಮ ಮನೋದೈಹಿಕ ವಿವರಗಳಲ್ಲಿ ಅನೇಕ ಬಗೆಯ ಭಾವಗಳ ರೂಪದಲ್ಲಿ ಜೀವಂತ ಕಾವಾಗಿ ಕೂತು ಪೊರೆಯುವ, ಕಾಡುವ, ಬೆಳೆಸುವ, ಕೆಲವೊಮ್ಮೆ ತೀವ್ರವಾಗಿ ಉರಿದು ಆ ಭಾವದ ಉತ್ಕಟತೆಯಲ್ಲಿ ಈ ಬದುಕೆಂದರೇನು, ಈ ಬದುಕಿನೊಳಗಿನ ಸಾವೆಂದರೇನು ಎಂಬ ನಿಜವನ್ನು ಅರಿವಿಗೆ ಬರುವಂತೆ ಮಾಡುವ “ಅಗ್ನಿ’ಯ ರಹಸ್ಯವನ್ನು, ಬದುಕು-ಸಾವುಗಳ ದೇವನಾದ ಯಮನೇ ತಿಳಿಸುವುದು ಸಾಧ್ಯವೆಂದು ಉಪನಿಷತ್ತು ಗ್ರಹಿಸಿದೆ. ಯಮನಾದರೋ, ಈಗ, ಬರಿಯ ವರದಾತನಲ್ಲ ; ವಿದ್ಯಾ ರಹಸ್ಯಗಳನ್ನು ತಿಳಿಸಬಲ್ಲ ಆಚಾರ್ಯನೇ ಆಗಿಬಿಟ್ಟನು. ನಚಿಕೇತನು ಪ್ರಿಯ ಶಿಷ್ಯನೇ ಆಗಿಬಿಟ್ಟನು. ಯಮ ಮತ್ತು ತನ್ನ ನಡುವಿನ ಸಂಬಂಧದಲ್ಲಿ ತನ್ನ ಕರ್ತವ್ಯದ ಭಾಗವೇನು ಎಂದು ನಚಿಕೇತನು ಮೊದಲೇ ಚಿಂತಿಸಿದ್ದನು. ಆ ಚಿಂತನೆಗೆ ಈಗ ಹೀಗೆ ವಿದ್ಯೆಯ ಆಕಾರವೊಂದು ಬಂದಿತು. ಸಾವೆಂದರೆ ಗುರು! ಬದುಕೆಂದರೆ ಸಾವು ವಿವರಿಸುವ ಪಾಠ!- ಎಂಬ ಆಕಾರ. ನಿನ್ನನ್ನು ಯಮನಿಗೆ ನೀಡಿದ್ದೇನೆನ್ನುವ ತಂದೆಯಾಡಿದ ಮಾತು ಈಗ, ಮಗನನ್ನು ಗುರುಕುಲ ವಾಸಕ್ಕೆ ಕಳುಹಿಸಿಕೊಡುವ ಮಾತಾಗಿಬಿಟ್ಟಿತು! ಯಮನಾದರೋ ರೂಢಿಗತವಾದ ಪಶು-ಪಾಶಗಳ ಮಾತನ್ನು ಬಿಟ್ಟು , ಪಾಪ-ಪುಣ್ಯಗಳ ಮಾತನ್ನು ಬಿಟ್ಟು , ಅರಿವಿನ ರಹಸ್ಯಗಳನ್ನು ತೆರೆದಿಡುವ ಅವಕಾಶ ಹೀಗೆ ಬಂದುದಕ್ಕಾಗಿ ಹಿಗ್ಗಿ ಹೋಗಿರಬೇಕು. ಯಾರೂ, ಯಾವುದೂ ಹೆಚ್ಚು ಕಾಲ ತನ್ನ ರಹಸ್ಯಗಳನ್ನು ತನ್ನಲ್ಲೇ ಹೊತ್ತಿರಲಾರದು. ರಹಸ್ಯಗಳನ್ನು ತಿಳಿಯಬೇಕೆಂಬ ಹಂಬಲ ಮನುಜರಲ್ಲಿ ಹೇಗೆ ಸಹಜವೋ ಹಾಗೆಯೇ ರಹಸ್ಯಗಳನ್ನು ಬಿಚ್ಚಿಡಬೇಕೆಂಬ ಹಂಬಲವೂ ಆ ಬದಿಯಲ್ಲಿರುವ ಸಣ್ತೀಗಳಿಗೆ ಸಹಜವೆಂಬಂತೆ ಇದೆ.

ಯಮನು ಹೇಳಿದನಂತೆ : ಸ್ವರ್ಗಲೋಕದ ಬಾಗಿಲನ್ನು ತೆರೆಯಬಲ್ಲ ಅಗ್ನಿಯ ರಹಸ್ಯವನ್ನು ಮಾತ್ರವಲ್ಲ , ಅನಂತ ವ್ಯಾಪ್ತಿಯ ಅಗ್ನಿಯ ನಿಗೂಢಗಳನ್ನೆಲ್ಲ- ವ್ಯಾಪ್ತಿಯು ವಿಸ್ತಾರವಾದಂತೆ ತೋರಿಕೆಯು ಕಡಿಮೆಯಾಗಿ ಇರುವಿಕೆಯು ನಿಗೂಢವಾಗುವುದು- ಇಂಥ ನಿಗೂಢಗಳನ್ನೆಲ್ಲ ವಿವರಿಸುವೆ. ಅಥವಾ ಅಗ್ನಿಗೂ ಅಗ್ನಿಯಾಗಿರುವ, ಅಂತರ್ಯಾಮಿಯಾಗಿರುವ ಸಣ್ತೀದ ರಹಸ್ಯಗಳನ್ನು , ಅದರೆಲ್ಲ ತಾಂತ್ರಿಕ ವಿವರ ಜೊತೆಗೆ- ವಿವರಿಸುವೆ.

Advertisement

ಹಾಗೆ “ಅಗ್ನಿ’ ಅಂದರೆ ಯಜ್ಞವೇದಿಕೆಯಲ್ಲಿ ಬೆಳಗುವ “ಅಗ್ನಿ’ಯೂ ಆಗಿ, ಈ ಲೋಕದ ಸೃಷ್ಟಿಗೆ ಕಾರಣವಾದ “ಅಗ್ನಿ’ಯೂ ಆಗಿಬಿಟ್ಟಿತು. ಲೋಕಾದಿಮಗ್ನಿಂ. ಇಟ್ಟಿಗೆಗಳಿಂದ ಕಟ್ಟಿದ ಯಜ್ಞವೇದಿಕೆಯಲ್ಲಿ ಮಿತಿಗೆ ಒಳಪಟ್ಟು ಬೆಳಗುವ-ಯಜ್ಞಾಗ್ನಿಯೂ ಹೌದು. ಎಲ್ಲ ಮಿತಿಗಳನ್ನೂ ಮೀರಬಲ್ಲ “ಅಗ್ನಿ’ಯೂ ಹೌದು. ಯಜ್ಞ ವೇದಿಕೆಗೆ ಎಷ್ಟು ಮಣ್ಣಿನ ಇಟ್ಟಿಗೆಗಳು ಬೇಕೆನ್ನುವ, ವೇದಿಕೆಯ ರಚನೆ ಹೇಗಿರಬೇಕೆನ್ನುವ, ವಾಸ್ತುವಿಚಾರವೂ ಹೌದು. ಇಟ್ಟಿಗೆಗಳ ಮೇಲೆ ಇಟ್ಟಿಗೆ ಇಟ್ಟು ಕಟ್ಟುವ ಉತ್ಸಾಹವೂ ಹೌದು. ಅಗ್ನಿಯೊಳಗಿರುವ ಅಗ್ನಿಯನ್ನು ನೋಡುವ, ವಿಂಗಡಿಸಿ ನೋಡುವ, ರಹಸ್ಯವನ್ನು ಕೆದಕುವ ಕುತೂಹಲವೂ ಹೌದು. ವಿಂಗಡಿಸಿ ನೋಡುವುದೆಂದರೆ- ಇನ್ನೊಂದು ಬಗೆಯಲ್ಲಿ- ಮುರಿಯುವ ಕಲೆಯೂ ಹೌದು!

ಎಲ್ಲವೂ ಒಟ್ಟಿಗೇ ಇದೆ ಎಂದು ಅರಿವಾಗುವುದಕ್ಕೆ ಅದನ್ನು ವಿಂಗಡಿಸಿಯೂ ನೋಡಬೇಕಾಗುತ್ತದೆ ಎನ್ನುವುದು ತುಸು ವಿಲಕ್ಷಣವಾಗಿ ಕಾಣಿಸುವ-ನಮ್ಮ ಅರಿವಿನ ದಾರಿಯನ್ನು ಸೂಚಿಸುವ- ಒಂದು ವಿದ್ಯಮಾನವಾಗಿದೆ. ಕವಿ ಬೇಂದ್ರೆಯವರು ಶ್ರೀ ಅರವಿಂದರ ಚಿಂತನೆಯ ಪ್ರಭಾವಕ್ಕೆ ಒಳಗಾದುದರ ಬಗ್ಗೆ ಬರೆದುದು ನೆನಪಾಗುತ್ತದೆ. ಬೇಂದ್ರೆ ಹೀಗೆ ಬರೆದರು: ಓಛಿಚಠಿs ಕಾವ್ಯದ ಬಗ್ಗೆ ಬರೆಯುವಾಗ ಅರವಿಂದರು ಕೀಟ್ಸ್‌ ಕಾವ್ಯದಲ್ಲಿ ಐಂದ್ರಯಿಕ, ಕಾಲ್ಪನಿಕ, ಬೌದ್ಧಿಕ ಮತ್ತು ಆದರ್ಶ ಸೌಂದರ್ಯಗಳೆಂದು ನಾಲ್ಕು ಮುಖದ ಸೌಂದರ್ಯ ದರ್ಶನವಿದೆ ಎಂದು ಬರೆದರು. ಈ ವಾಕ್ಯದ ಪರಿಣಾಮವಾಗಿ ನನ್ನ ಜೀವನಕ್ಕೆ ಚತುರ್ಮುಖತೆಯನ್ನು ಕಂಡುಕೊಂಡೆ ಎಂದ ರು. ಸೌಂದರ್ಯದ ಈ ನಾಲ್ಕು ಮುಖಗಳನ್ನು ದೈಹಿಕ, ಸಾಂಸ್ಕೃತಿಕ, ಪ್ರಾತಿಭ ಮತ್ತು ಸಾಕ್ಷಿಕ ಎಂದು ಮನೋಜ್ಞವಾಗಿ ಬೇಂದ್ರೆ ಕರೆದರು. ನಿಜ. ಸೌಂದರ್ಯಾನುಭವವನ್ನು ಹೀಗೆ ವಿಂಗಡಿಸಿ ಗುರುತಿಸಬಹುದೆನ್ನುವುದು ನಿಜ. ಈ ನಾಲ್ಕನ್ನು ಮತ್ತಷ್ಟು ಸೂಕ್ಷ್ಮವಾಗಿಯೂ ವಿಂಗಡಿಸಬಹುದು. ಆದರೆ ನಿಜವಾಗಿ ಅನುಭವವು ಅಖಂಡವಲ್ಲವೆ? ಅದು ಈ ನಾಲ್ಕು ಬಿಡಿ ತುಣುಕುಗಳು ಸೇರಿ ಇಡಿಯಾದದ್ದೇ? ಅರ್ಥಮಾಡಿಕೊಳ್ಳುವ ಒಂದು ಅನುಕೂಲಕ್ಕಾಗಿ ಹೀಗೆ ವಿಂಗಡಿಸಿದರೂ ಈ ನಾಲ್ಕರೊಳಗಿನ ಪರಸ್ಪರ ಸಂಬಂಧ- ಅವಿನಾಭಾವ ಸಂಬಂಧವಲ್ಲವೆ? ಎಂದು ಕೇಳಿದರೆ ಅರವಿಂದರು ಹೇಳಿದರಂತೆ- ನಾಲ್ಕು ಎಂದರೆ ಚೌಕ. ಚೌಕವು ಪರಿಪೂರ್ಣತೆಯ ಸಂಕೇತ. ಅಂದರೆ ಈ ಆಕಾರದಲ್ಲಿ ಅತೀತ ಪ್ರಜ್ಞೆಯು ಅವತರಿಸುವುದು, ನೆಲೆಯಾಗುವುದು ಸಾಧ್ಯ ಎಂದರಂತೆ. ಅಯಮಾತ್ಮಾ ಚತುಷ್ಪಾತ್‌ ಎಂಬ- ಆತ್ಮನಿಗೆ ನಾಲ್ಕು ಪಾದಗಳು- ಎಂಬ ಉಪನಿಷತ್ತಿನ ಮಾತನ್ನು ಉಲ್ಲೇಖೀಸಿದರಂತೆ.

ಅಂದರೆ ನಾಲ್ಕೆಂದು ಕಂಡರೂ ಅದು ಒಂದೇ. ಒಂದೇ ಆಗಿದ್ದರೂ ಅದಕ್ಕೆ ನಾಲ್ಕು ಮುಖ ಎಂಬ ನಿಜ. ಒಂದೇ ಎಂದಾಗ ಒಂದಾಗಿ ಕಟ್ಟಿದಂತೆ ಕೇಳಿಸುತ್ತದೆ. ನಾಲ್ಕು ಎಂದಾಗ ಮುರಿದಂತೆ ಕೇಳಿಸುತ್ತದೆ! ಅರಿವಿನ ನಿಜ ಹೀಗಿದೆ. ಈ ರಹಸ್ಯಗಳನ್ನೆಲ್ಲ ಯಮ, ನಚಿಕೇತನಿಗೆ ಪ್ರೀತಿಯಿಂದ ಹೇಳಿದನಂತೆ. ಈಗ ಈ ಗುರು-ಶಿಷ್ಯ ಸಂಬಂಧ ಗಾಢವಾಯಿತೆಂದು ಸೂಚಿಸುವುದು ಉಪನಿಷತ್ತಿಗೆ ಇಷ್ಟ. ಹಾಗೆ, ಯಮನು ಹೇಳಿದ್ದನ್ನೆಲ್ಲ , ಒಮ್ಮೆ ಕೇಳಿದ್ದನ್ನು ಎಂದೂ ಮರೆಯದ ನಚಿಕೇತ, ಹಾಗೇ ಮರಳಿ ಯಥಾವತ್ತಾಗಿ, ಎಲ್ಲೂ ಶಿಥಿಲವಾಗದೆ, ಯಮನ ಮನಸ್ಸಿಗೇ ಕನ್ನಡಿ ಹಿಡಿದಂತೆ- ಒಪ್ಪಿಸಿ ಬಿಟ್ಟನಂತೆ- ಪ್ರವದದ್ಯಥೋಕ್ತಂ.

ಈ ಪುನರುಚ್ಚಾರವೆನ್ನುವುದು ಉಪನಿಷತ್‌ ಸಂಸ್ಕೃತಿಯಲ್ಲಿ ಬಹಳ ಸೃಷ್ಟಿಶೀಲವಾದ ವಿದ್ಯಮಾನವಾಗಿದೆ. ನಿಜ; ಮನಸ್ಸು ಎಚ್ಚರ ತಪ್ಪಿದರೆ ಪುನರುಚ್ಚಾರವು ಒಂದು ಯಾಂತ್ರಿಕ ಕ್ರಿಯೆಯಾಗಬಹುದು. ಜಡವಾಗಬಹುದು. ಆದರೆ ಎಚ್ಚರದಲ್ಲಿದ್ದರೆ- ಪುನರುಚ್ಚಾರವು- ಮನಸ್ಸನ್ನು ಮತ್ತಷ್ಟು ಸೂಕ್ಷ್ಮಸ್ತರಕ್ಕೆ ಒಯ್ಯುವ ಮಾರ್ಗವೂ ಹೌದು. ಎಚ್ಚರ ತಪ್ಪಿದರೆ ಜಡ ಸಮರ್ಥನೆಯಂತೆ ಭಾಸವಾಗುವ ಪುನರುಚ್ಚಾರವು, ಎಚ್ಚರದಲ್ಲಿದ್ದಾಗ, ಒಂದೇ ಸತ್ಯದ, ಒಂದೇ ನಿಲುವಿನ, ಅನೇಕ ಮುಖಗಳನ್ನು ತೋರಿಸುವ ಹಾದಿಯಾಗಬಹುದು. ಕನ್ನಡಿಗಳ ಒಂದು ಕೋಣೆಯ ನಡುವೆ ಹಚ್ಚಿಟ್ಟ ದೀಪವು ಎಲ್ಲೆಲ್ಲೂ ತನ್ನ ಪ್ರತಿಫ‌ಲನಗಳನ್ನು ಚೆಲ್ಲುತ್ತದೆ. ಅದು ವಸ್ತುವಿನ ಪ್ರತಿಫ‌ಲನವೂ ಹೌದು; ಪ್ರತಿಫ‌ಲನಗಳ ಪ್ರತಿಫ‌ಲನವೂ ಹೌದು. ಬೆಳಕನ್ನು ಅದರ ಪ್ರತಿಫ‌ಲನದ ಮೂಲಕವೇ ಅನುಭವಿಸ ಬಹುದಷ್ಟೇ ಮತ್ತು ಪ್ರತಿಫ‌ಲನದ ಮೂಲಕವೇ ಬೆಳಕನ್ನು ಬೆಳಕೆಂದು ಅರಿಯ ಬಹುದಷ್ಟೇ. ಪುನರುಚ್ಚಾರವು ತಾನೊಂದು ಪ್ರತಿಫ‌ಲನವೇ ಆಗಿ ಬೆಳಕನ್ನು ತನ್ನಲ್ಲೇ ಅನುಭವಿಸುವ ಸೋಜಿಗದ ಬಗೆಯಾಗಿದೆ!

ಲಕ್ಷ್ಮೀಶ ತೋಳ್ಪಾಡಿ
ಕಲೆ : ಎಂ. ಎಸ್‌. ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next