ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಯೋಜನೆ ವಿಳಂಬವಾಗುವುದಕ್ಕೆ ನಾವು ಕಾರಣರಲ್ಲ. ಹಿಂದಿನ ಯುಪಿಎ ಸರಕಾರ ಕರಾವಳಿಗೆ ನೀಡಿದ್ದ ಪಾಪದ ಕೊಡವನ್ನು ಅನಗತ್ಯವಾಗಿ ನಮ್ಮ ಮೇಲೆ ಇರಿಸಿ, ಅಪವಾದವನ್ನು ನಮ್ಮ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೂ ಕೂಡ ಕರಾವಳಿಯ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ
ಸರಕಾರ ಮತ್ತು ಕೇಂದ್ರ ಸಚಿವ ರೊಂದಿಗೆ ನಿರಂತರ ಮಾತುಕತೆ
ನಡೆಸಿ, ಗುತ್ತಿಗೆದಾರ ಕಂಪೆನಿಗೆ ಒತ್ತಡ ಹೇರಿ ಕಾಮಗಾರಿ ಪೂರ್ಣ ಗೊಳಿಸು ವತ್ತ ನಾವು ಲಕ್ಷ್ಯ ವಹಿಸಿದ್ದೇವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಕಾಪು ಜೇಸಿ ಭವನದಲ್ಲಿ ಶುಕ್ರವಾರ ನಡೆದ ಕಾಪು ಪುರಸಭಾ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತ ನಾಡಿ, ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆಗಳೇ ಬಿಜೆಪಿಯ ವಿಜಯಕ್ಕೆ ಕಾರಣವಾಗಲಿವೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ ಬಿಜೆಪಿ ಯನ್ನು ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಸದಸ್ಯತನ ನೋಂದಣಿಯಲ್ಲಿ ಪ್ರಪಂಚದಲ್ಲೇ ಪ್ರಥಮ ಸ್ಥಾನದಲ್ಲಿರುವ ಬಿಜೆಪಿಯು ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಗಳಿಸುವ ಮೂಲಕ ತನ್ನ ಹಿರಿಮೆ-ಗರಿಮೆ ಹೆಚ್ಚಿಸಿಕೊಳ್ಳಲಿದೆ. ಇದರಲ್ಲಿ ಕಾಪು ಕ್ಷೇತ್ರದ ಮತದಾರರ ಪಾತ್ರವೂ ದೊಡ್ಡದಾಗಲಿದೆ ಎಂದವರು ತಿಳಿಸಿದರು.
ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಕ್ಷೇತ್ರ ಉಸ್ತುವಾರಿ ವಿಜಯ ಕೊಡವೂರು, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಕಾಪು ಕ್ಷೇತ್ರ ಬಿಜೆಪಿ ವಿವಿಧ ಮೋರ್ಚಾಗಳ ಪ್ರಮುಖರಾದ ಪ್ರವೀಣ್ ಪೂಜಾರಿ, ಕೇಸರಿ ಯುವರಾಜ್, ಶೈಲೇಶ್ ಪೂಜಾರಿ, ಪುರಸಭಾ ಸದಸ್ಯರಾದ ಗುಲಾಬಿ ಪಾಲನ್, ರಮೇಶ್ ಹೆಗ್ಡೆ, ಅರುಣ್ ಶೆಟ್ಟಿ ಪಾದೂರು, ಸುಧಾ ರಮೇಶ್, ಮೋಹಿನಿ ಶೆಟ್ಟಿ, ಶಾಂಭವಿ ಕುಲಾಲ್, ಅನಿಲ್ ಕುಮಾರ್, ರಮಾ ವೈ. ಶೆಟ್ಟಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಪು ಪುರಸಭಾ ವ್ಯಾಪ್ತಿಯ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಪುರಸಭಾ ಸದಸ್ಯ ಕಿರಣ್ ಆಳ್ವ ನಿರೂಪಿಸಿ, ವಂದಿಸಿದರು.