Advertisement

ಇಂದು ಯೋಗಿ ಪಟ್ಟಾಭಿಷೇಕ

12:14 AM Mar 25, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾಗಿ ಯೋಗಿ ಆದಿತ್ಯನಾಥ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಸಕಲ ಸಿದ್ಧತೆ ನಡೆದಿದೆ. ಅದರ ಭಾಗವಾಗಿ ರಾಜಧಾನಿ ಲಕ್ನೋದಲ್ಲಿ ಗುರುವಾರ ಬಿಜೆಪಿಯ ನೂತನ ಶಾಸಕರ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಅದರಲ್ಲಿ ಯೋಗಿ ಆದಿತ್ಯನಾಥ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

Advertisement

ಶಾಸಕಾಂಗ ಸಭೆಯಲ್ಲಿ ಭಾವುಕರಾದ ಯೋಗಿ ಅವರು, ಉತ್ತರ ಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದ ತಿಳಿಸಿದರು. “ನಾನು 2017ರಲ್ಲಿ ಒಬ್ಬ ಸಂಸದನಾಗಿದ್ದೆ ಅಷ್ಟೇ. ಆಗ ಪಕ್ಷ ನನ್ನನ್ನು ನಂಬಿ ಮುಖ್ಯಮಂತ್ರಿ ಸ್ಥಾನ ಕೊಟ್ಟಿತು. ಆಡಳಿತದ ಬಗ್ಗೆ ಏನೂ ಗೊತ್ತಿರದ ನನಗೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅಮಿತ್‌ ಶಾ ಅವರು ಉತ್ತಮ ಸರಕಾರವನ್ನು ಹೇಗೆ ರೂಪಿಸಬೇಕು’ ಎಂದು ಹೇಳಿಕೊಟ್ಟರು.

ಒಬ್ಬ ಸಂಸದನಾಗಿ ಸೀಮಿತ ಕ್ಷೇತ್ರಕ್ಕೆ ಕೆಲಸ ಮಾಡಬೇಕಾಗುತ್ತದೆ. ಆದರೆ ಉತ್ತರ ಪ್ರದೇಶ ದಂತಹ ರಾಜ್ಯದ ಆಡಳಿತ ನಡೆಸಬೇಕೆಂದರೆ ಅದು ಸುಲಭದ ಕೆಲಸವಲ್ಲ. ನನಗೆ ಸಿಕ್ಕ ಸೂಕ್ತ ಮಾರ್ಗದರ್ಶನದಿಂದಲೇ ನನ್ನಿಂದ ಅದು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.

ದಾಖಲೆ ಬರೆದೆವು: ಇದೇ ವೇಳೆ ಮಾತನಾ ಡಿದ ಕೇಂದ್ರ ಗೃಹ ಸಚಿವ ಹಾಗೂ ಉತ್ತರ ಪ್ರದೇಶದ ಚುನಾವಣೆಗೆ ಕೇಂದ್ರದಿಂದ ವೀಕ್ಷಕರಾಗಿದ್ದ ಅಮಿತ್‌ ಶಾ ಮಾತನಾಡಿ, “ಕಳೆದ 35 ವರ್ಷಗಳಲ್ಲಿ ಈ ರಾಜ್ಯದಲ್ಲಿ ಯಾವ ಪಕ್ಷವೂ ಸತತ ಎರಡನೇ ಬಾರಿಗೆ ಸರಕಾರ ರಚಿಸಿರಲಿಲ್ಲ. ಆದರೆ ನಾವು ಮೂರನೇ ಎರಡರಷ್ಟು ಮತ ಪಡೆಯುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದ್ದೇವೆ’ ಎಂದರು.

ಇಂದು ಪ್ರಮಾಣವಚನ:  ಯೋಗಿ ಆದಿತ್ಯ ನಾಥ ಅವರು ಶುಕ್ರವಾರ ಸಂಜೆ 4 ಗಂಟೆಗೆ ಲಕ್ನೋದ ವಾಜಪೇಯಿ ಕ್ರೀಡಾಂಗಣದಲ್ಲಿ ರಾಜ್ಯಪಾಲರಾಗಿರುವ ಆನಂದಿಬೆನ್‌ ಪಟೇಲ್‌ರಿಂದ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Advertisement

ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿಯ ಆಡಳಿತದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಅನೇಕ ಹಿರಿಯ ಮುಖಂಡರಿಗೆ ಆಹ್ವಾನ ಕೊಡಲಾಗಿದೆ. ವಿಶೇಷವಾಗಿ ಕಾರ್ಯ ಕ್ರಮಕ್ಕೆ ಇತ್ತೀಚೆಗೆ ಬಿಡುಗಡೆಯಾಗಿರುವ “ದಿ ಕಾಶ್ಮೀರ್‌ ಫೈಲ್ಸ್‌’ ಸಿನೆ ತಂಡವನ್ನು ಆಹ್ವಾನಿಸಲಾಗಿದೆ.

ಡಿಸಿಎಂ ಯಾರು?: ಯೋಗಿ ಅವರ ಜತೆ ಉಪ ಮುಖ್ಯಮಂತ್ರಿಯಾಗಿ ಮತ್ತು ಸಚಿವರಾಗಿ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿಯನ್ನು ಪಕ್ಷ ಇನ್ನೂ ಬಿಟ್ಟುಕೊಟ್ಟಿಲ್ಲ. ಈ ಹಿಂದಿನ ಸರಕಾರದಲ್ಲಿ ಉಪ ಮುಖ್ಯ ಮಂತ್ರಿಗಳಾಗಿದ್ದ ಕೇಶವ ಮೌರ್ಯ ಮತ್ತು ದಿನೇಶ್‌ ಶರ್ಮಾ ಅವರಿಗೆ ಮತ್ತೂಮ್ಮೆ ಡಿಸಿಎಂ ಸ್ಥಾನ ಕೊಡಬಹುದು ಎನ್ನಲಾಗಿದೆ. ಆದರೆ ಕೇಶವ್‌ ಮೌರ್ಯ ಅವರು ಈ ಬಾರಿ ಚುನಾವಣೆ ಯಲ್ಲಿ ಸೋತಿದ್ದರೆ, ದಿನೇಶ್‌ ಶರ್ಮಾ ಅವರು ಸ್ಪರ್ಧಿಸಿಯೇ ಇರಲಿಲ್ಲ. ಹಾಗಾಗಿ ಕುತೂಹಲ ಇನ್ನೂ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next