Advertisement

ಯುಪಿ ಯೋಧಾ-ತೆಲುಗು ರೋಚಕ ಟೈ

06:00 AM Nov 08, 2018 | |

ಗ್ರೇಟರ್‌ ನೋಯ್ಡಾ: ಪ್ರೊ ಕಬಡ್ಡಿ ಲೀಗ್‌ನ ಗ್ರೇಟರ್‌ ನೋಯ್ಡಾ ಚರಣದ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ ಮತ್ತು ಹರ್ಯಾಣ ಸ್ಟೀಲರ್ ತಂಡಗಳು ಜಿದ್ದಾಜಿದ್ದಿನಿಂದ ಹೋರಾಡಿದವು. ಅಂತಿಮವಾಗಿ ಜೈಪುರ 38-32 ಅಂಕಗಳಿಂದ ಹರ್ಯಾಣವನ್ನು ಉರುಳಿಸಿತು. ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ತೆಲುಗು ಟೈಟಾನ್ಸ್‌ ಬಹಳ ಎಚ್ಚರಿಕೆಯಿಂದ ಆಡಿದ್ದರಿಂದ ಪಂದ್ಯ ರೋಚಕ ಟೈಯಲ್ಲಿ ಅಂತ್ಯಗೊಂಡಿತು.

Advertisement

ದೀಪಾವಳಿ ಪ್ರಯುಕ್ತ ಪ್ರೊ ಕಬಡ್ಡಿಗೆ ಬುಧವಾರ ವಿಶ್ರಾಂತಿ,. ಗುರುವಾರ ಗ್ರೇಟರ್‌ ನೋಯ್ಡಾದಲ್ಲಿ ಕೊನೆಯ ದಿನವಾಗಿದ್ದು ಹರ್ಯಾಣ ತಂಡವು ದಿಲ್ಲಿ ದಬಾಂಗ್‌ ಮತ್ತು ಯುಪಿ ತಂಡವು ಬೆಂಗಳೂರು ತಂಡವನ್ನು ಎದುರಿಸಲಿದೆ. ನ. 9ರಿಂದ ಮುಂಬಯಿ ಚರಣ ಆರಂಭವಾಗಲಿದೆ.

ಮಿಂಚಿದ ದೀಪಕ್‌
ವಲಯ “ಎ’ಯ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಹರ್ಯಾಣ ಮತ್ತು ಜೈಪುರ ನಡುವಣ ಈ ಹೋರಾಟ ತೀವ್ರ ಪೈಪೋಟಿದಿಂದ ಸಾಗಿತ್ತು. ಭರ್ಜರಿ ರೈಡಿಂಗ್‌ ನಡೆಸಿದ ದೀಪಕ್‌ ಹೂಡ ಎದುರಾಳಿಗೆ ಸಿಂಹಸ್ವಪ್ನರಾದರು. 22 ಬಾರಿ ರೈಡ್‌ ಮಾಡಿದ ದೀಪಕ್‌ 12 ಅಂಕ ಪಡೆದು ಜೈಪುರ ಗೆಲುವಿಗೆ ತಮ್ಮ ಕೊಡುಗೆ ಸಲ್ಲಿಸಿದರು. ನಿತಿನ್‌ ರಾವಲ್‌ ರೈಡ್‌ ಮತ್ತು ಟ್ಯಾಂಕಲ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದರು. ಹರ್ಯಾಣದ ರೈಡರ್‌ಗಳಿಗೆ ಭಯ ಹುಟ್ಟಿಸಿದ ನಿತಿನ್‌ ರೈಡಿಂಗ್‌ನಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡಿದರು.

ಹರ್ಯಾಣ ಪರ ವಿಕಾಸ್‌ ಕಾಂಡೋಲ ಭರ್ಜರಿ ರೈಡಿಂಗ್‌ ನಡೆಸಿದರು. ಆದರೆ ಮೊಹಿತ್‌ ಚಿಲ್ಲಾರ್‌ ಅವರ ಟ್ಯಾಕಲ್‌ನಿಂದ ವಿಕಾಸ್‌ ಹಲವು ಅಂಕ ಗಳಿಸಲು ವಿಫ‌ಲರಾದರು. ವಿಕಾಸ್‌ ಒಟ್ಟಾರೆ 10 ಅಂಕ ಸಂಪಾದಿಸಿದರು. ಮೊಹಿತ್‌ ಟ್ಯಾಕಲ್‌ನಲ್ಲಿ ನಾಲ್ಕಂಕ ಪಡೆದರೆ ಸೆಲ್ವಮನಿ 4 ಅಂಕ ಪಡೆದರು.

ಕಳೆದ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಜೈಪುರ ಈ ಬಾರಿಯಾದರೂ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿತ್ತು. ರೈಡ್‌ ಮೂಲಕ ಅನೂಪ್‌ ಕುಮಾರ್‌ ಅಂಕ ಖಾತೆ ತೆರೆದರು. ಅನೂಪ್‌ ತನ್ನ ಮೊದಲ ರೈಡ್‌ನ‌ಲ್ಲಿ ಬೋನಸ್‌ ಅಂಕ ಗಳಿಸಿದರು. ಹರ್ಯಾಣ ಆಟಗಾರರ ಸತತ ತಪ್ಪುಗಳಿಂದ ಜೈಪುರ ಮುನ್ನಡೆ ಗಳಿಸುವಂತಾಯಿತು. 9ನೇ ನಿಮಿಷದಲ್ಲಿ ಹರ್ಯಾಣ ಆಲೌಟ್‌ ಆಗಿದ್ದರಿಂದ ಜೈಪುರ 11-6 ಮುನ್ನಡೆ ಪಡೆಯಿತು.

Advertisement

ಯುಪಿ ಮತ್ತೆ ಟೈ
ಯುಪಿ ಯೋಧಾ ಮತ್ತು ತೆಲುಗು ಟೈಟಾನ್ಸ್‌ ನಡುವಣ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗಿತು. ಎರಡೂ ತಂಡಗಳು ಉಗ್ರವಾಗಿ ಕಾದಾಡಿದ್ದರಿಂದ ಅಂಕ ಗಳಿಕೆ ಕುಂಠಿತವಾಯಿತು. ಅಂತಿಮವಾಗಿ 26-26 ಅಂಕಗಳಿಂದ ಪಂದ್ಯ ಟೈಗೊಂಡಿತು. ಎರಡೂ ತಂಡಗಳ ರೈಡರ್ ಮತ್ತು ಡಿಫೆಂಡರ್ ಶ್ರೇಷ್ಠ ಮಟ್ಟದ ನಿರ್ವಹಣೆ ನೀಡಿದ್ದರಿಂದ ಪಂದ್ಯ ಕ್ಷಣಕ್ಷಣಕ್ಕೂ ರೋಚಕತೆಯನ್ನು ಸೃಷ್ಟಿಸಿತ್ತು. ಯುಪಿ ಪರ ಸಚಿನ್‌ ಕುಮಾರ್‌ ಐದಂಕ ಪಡೆದರೆ ಶ್ರೀಕಾಂತ್‌ ಜಾಧವ್‌, ರಿಷಾಂಕ್‌ ದೇವಾಡಿಗ ಮತ್ತು ನಿತಿನ್‌ ಕುಮಾರ್‌ ತಲಾ ನಾಲ್ಕು ಅಂಕ ಗಳಿಸಿದರು.

ಯುಪಿ ಯೋಧಾ ಇಷ್ಟರವರೆಗೆ 11 ಪಂದ್ಯಗಳನ್ನು ಆಡಿದ್ದು ಮೂರನೇ ಪಂದ್ಯವನ್ನು ಟೈಮಾಡಿಕೊಂಡಿದೆ. ಮೂರು ಪಂದ್ಯಗಳಲ್ಲಿ ಗೆದ್ದಿದ್ದರೆ ಐದರಲ್ಲಿ ಸೋತಿದೆ. ಆದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತೆಲುಗು ಟೈಟಾನ್ಸ್‌ ಮೂರನೇ ಸ್ಥಾನದಲ್ಲಿದೆ. ತೆಲುಗು ಪರ ನೀಲೇಶ್‌ ಸಾಲುಂಕೆ, ಮೊಸೆರ್‌ ಮತ್ತು ಅಬೂಜಲ್‌ ಮಿಗಾನಿ ತಲಾ ನಾಲ್ಕು ಅಂಕ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next