ಲಕ್ನೋ: ಮಹಿಳೆಯೊಬ್ಬಳು ತನ್ನ ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಮಹಿಳೆಯ ಪತಿ ರಾಜು ಈ ಬಗ್ಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 87 ರ ಅಡಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಏನಿದು ಘಟನೆ?: ಕಳೆದ ಕೆಲ ವರ್ಷದಿಂದ ನಾನು ಮತ್ತು ನನ್ನ ಪತ್ನಿ ರಾಜೇಶ್ವರಿ ನಮ್ಮ ಆರು ಮಕ್ಕಳೊಂದಿಗೆ ಹರ್ದೋಯ್‌ನ ಹರ್ಪಾಲ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಕೆಲ ಸಮಯದಿಂದ 45 ವರ್ಷದ ನನ್ಹೆ ಪಂಡಿತ್ ಎಂಬ ಭಿಕ್ಷುಕ ಆಗಾಗ ಭಿಕ್ಷೆ ಬೇಡಲು ನೆರೆಹೊರೆಗೆ ಬರುತ್ತಿದ್ದ. ಈ ವೇಳೆ ಪಂಡಿತ್ ಆಗಾಗ ನನ್ನ ಪತ್ನಿ ರಾಜೇಶ್ವರಿ ಜತೆ ಮಾತನಾಡುತ್ತಿದ್ದ. ಪ್ರತಿನಿತ್ಯ ಇಬ್ಬರು ಮಾತನಾಡುತ್ತಾ ಆತ್ಮೀಯರಾಗಿದ್ದರು. ಭಿಕ್ಷುಕ ನನ್ಹೆ ಫೋನ್‌ನಲ್ಲೂ ರಾಜೇಶ್ವರಿ ಜತೆ ಮಾತನಾಡುತ್ತಿದ್ದ ಎಂದು ದೂರಿನಲ್ಲಿ ರಾಜು ಹೇಳಿದ್ದಾರೆ.
”ಜನವರಿ 3ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಪತ್ನಿ ರಾಜೇಶ್ವರಿ, ನಮ್ಮ ಮಗಳು ಖುಷ್ಬೂಗೆ ಬಟ್ಟೆ, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಹೋಗಿದ್ದಳು. ಆಕೆ ವಾಪಸ್ ಬಾರದೆ ಇದ್ದಾಗ ಎಲ್ಲ ಕಡೆ ಹುಡುಕಾಡಿದ್ದೆ. ನಾನು ಎಮ್ಮೆಯನ್ನು ಮಾರಿ ಸಂಪಾದಿಸಿದ ಹಣದೊಂದಿಗೆ ನನ್ನ ಪತ್ನಿ ಮನೆಯಿಂದ ಆಚೆ ಹೋಗಿದ್ದಳು. ನನ್ಹೆ ಪಂಡಿತ್ ಆಕೆಯನ್ನು ಕರೆದುಕೊಂಡು ಹೋಗಿರುವುದಾಗಿ ನನಗೆ ಸಂಶಯವಿದೆ” ಎಂದು ಪಂಡಿತ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ಸದ್ಯ ಪಂಡಿತ್ ಅವರನ್ನು ಹುಡುಕಾಡುತ್ತಿದ್ದಾರೆ. ಪೊಲೀಸರು ಹುಡಕಾಟ ನಡೆಸಿದ ನಾಪತ್ತೆಯಾಗಿದ್ದ ಮಹಿಳೆ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಮಹಿಳೆಯಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.