ಲಕ್ನೋ:ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಗಂಗಾ ಯಮುನಾ ಇದ್ದಂತೆ. ಅಷ್ಟೇ ಅಲ್ಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ದ್ವಿಮುಖ ನೀತಿ ಹಾಗೂ ದ್ವೇಷದ ರಾಜಕಾರಣಕ್ಕೆ ತಕ್ಕ ಉತ್ತರ ನೀಡಲಿದೆ. ಈ ಮೈತ್ರಿ ಯುಪಿ ಅಭಿವೃದ್ಧಿ ಮತ್ತು ಶಾಂತಿಯ ಧ್ಯೋತಕವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ರಾಹುಲ್ ಗಾಂಧಿ ಮತ್ತು ಯುಪಿ ಸಿಎಂ ಅಖಿಲೇಶ್ ಯಾದವ್ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು.
ಅಖಿಲೇಶ್ ಮತ್ತು ನನ್ನ ನಡುವೆ ರಾಜಕೀಯವಾಗಿ ಹಾಗೂ ವೈಯಕ್ತಿಕ ನೆಲೆಯಲ್ಲಿ ಗೆಳೆತನ ಹೊಂದಿದ್ದೇವೆ. ಈ ಮೈತ್ರಿ ನನ್ನ ಮತ್ತು ಅಖಿಲೇಶ್ ನಡುವೆ ವೈಯಕ್ತಿಕವಾಗಿಯೂ ಉತ್ತಮ ಬೆಳವಣಿಗೆಯಾಗಲಿದೆ ಎಂದು ಹೇಳಿದರು.
ಒಡೆದು ಆಳುವ ನೀತಿಗೆ ಉತ್ತರಪ್ರದೇಶ ತಕ್ಕ ಉತ್ತರ ನೀಡಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿಯಿಂದ ಅಭಿವೃದ್ಧಿಗೆ ಮತ್ತಷ್ಟು ಬಲ ಬರಲಿದೆ ಎಂದರು.
ನಾನು, ರಾಹುಲ್ ಸೈಕಲ್ ನ 2 ಚಕ್ರಗಳಿದ್ದಂತೆ: ಅಖಿಲೇಶ್
ನಾನು ಮತ್ತು ರಾಹುಲ್ ಗಾಂಧಿ ಇಬ್ಬರು ಸೈಕಲ್ ನ ಎರಡು ಚಕ್ರಗಳಿದ್ದಂತೆ ಎಂದು ಅಖಿಲೇಶ್ ಯಾದವ್ ಬಣ್ಣಿಸಿದರು. ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿಲ್ಲ. ಇದು ಆರಂಭ, ಉತ್ತರಪ್ರದೇಶವನ್ನು ಅಭಿವೃದ್ದಿಯ ಪಥದತ್ತ ಕೊಂಡೊಯ್ಯುವುದೇ ನಮ್ಮ ಗುರಿಯಾಗಿದೆ ಎಂದು ಭರವಸೆ ನೀಡಿದರು.