ರಾಯ್ ಬರೇಲಿ (ಉತ್ತರ ಪ್ರದೇಶ) : ಈಗಿನ ಚುನಾವಣಾ ಅಭ್ಯರ್ಥಿಗಳು ಮತದಾರರ ಗಮನ ಸೆಳೆಯಲು ವಿಭಿನ್ನ ಐಡಿಯಾಗಳನ್ನು ಬಳಸುತ್ತಿದ್ದಾರೆ. ಹಿಂದಿನ ಕಾಲದಂತೆ ಮನೆ ಮನೆಗೆ ಹೋಗಿ ಚುನಾವಣಾ ಪ್ರಚಾರ ಮಾಡುವ ವಿಧಾನ ದಿನಗಳೆದಂತೆ ಕಡಿಮೆಯಾಗುತ್ತಿದೆ. ಆನ್ ಲೈನ್ ಮಾಧ್ಯಮಗಳ ಮೂಲಕವೂ ಅಂದ್ರೆ ಸೋಷಿಯಲ್ ಮೀಡಿಯಾಗಳಲ್ಲಿ ಮತಯಾಚನೆ ಮಾಡುವುದು ಕೂಡ ಜೋರಾಗಿದೆ. ಆದ್ರೆ ಉತ್ತರ ಪ್ರದೇಶ ಸ್ಥಳೀಯ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳು ವಿಶೇಷ ರೀತಿಯಲ್ಲಿ ಚುನಾವಣಾ ಪ್ರಚಾರ ಮಾಡಿ ಗಮನ ಸೆಳೆದಿದ್ದಾರೆ.
ಹೌದು ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬೀದಿ ನಾಯಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ನಾಯಿ ಬೆನ್ನಿಗೆ ಅಭ್ಯರ್ಥಿಯ ಪಾಂಪ್ಲೆಟ್ ಗಳನ್ನು ಅಂಟಿಸಿ ಪ್ರಚಾರ ಮಾಡಿ ಗಮನ ಸೆಳೆಯುತ್ತಿದ್ದಾರೆ. ನಾಯಿಯು ಎಲ್ಲೆಲ್ಲಿ ಓಡಾಡುತ್ತದೆಯೋ ಅಲ್ಲಲ್ಲಿ ಚುನಾವಣಾ ಪ್ರಚಾರ ಆಗಲಿದೆ ಎಂಬುದು ಆ ಅಭ್ಯರ್ಥಿಗಳ ಐಡಿಯಾ. ಸದ್ಯ ನಾಯಿಗೆ ಪಾಂಪ್ಲೆಟ್ ಅಂಟಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಈ ಬಗ್ಗೆ ಮಾತನಾಡಿರುವ ಚುನಾವಣಾ ಅಭ್ಯರ್ಥಿ, ಪ್ರಚಾರದಲ್ಲಿ ನಾಯಿಗಳನ್ನು ಬಳಕೆ ಮಾಡಿಕೊಳ್ಳಬಾರದು ಎಂದು ಯಾವ ರೂಲ್ಸ್ ಇಲ್ಲ. ನಾವೇನು ಬೀದಿ ನಾಯಿಗಳಿಗೆ ತೊಂದರೆ ಅಥವಾ ನೋವನ್ನು ನೀಡುತ್ತಿಲ್ಲ. ನಾವು ಪ್ರತಿ ನಿತ್ಯ ಅವುಗಳಿಗೆ ಆಹಾರವನ್ನು ಹಾಕ್ತೇವೆ. ಈ ಐಡಿಯಾದಿಂದ ಜನರ ಗಮನ ನಮ್ಮ ಕಡೆ ತಿರುಗುತ್ತದೆ ಎಂದಿದ್ದಾರೆ.
ಆದ್ರೆ ಪ್ರಾಣಿ ಪ್ರಿಯರು ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ಇದು ಶಿಕ್ಷಾರ್ಹ ಅಪರಾಧ ಎಂದಿದ್ದಾರೆ. ಪ್ರಾಣಿ ಪರ ಹೋರಾಟಗಾರ್ತಿ ರೀನಾ ಮಿಶ್ರಾ ಈ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದು, ಚುನಾವಣೆ ವೇಳೆ ಒಬ್ಬ ಮನುಷ್ಯ ತನ್ನ ಮುಖಕ್ಕೆ ಪ್ರಚಾರ ಪತ್ರಗಳನ್ನು ಅಂಟಿಸಿಕೊಂಡರೆ ಹೇಗಿರುತ್ತದೆ?. ನಾಯಿಗಳಿಗೆ ಪ್ರತಿಭಟಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರಚಾರ ಕಾರ್ಯಗಳಿಗೆ ನಾಯಿಗಳನ್ನು ಬಳಕೆ ಮಾಡಿಕೊಳ್ಳುವ ಹಕ್ಕು ಇಲ್ಲ. ಪೊಲೀಸರು ಈ ಕೂಡಲೇ ಸಂಬಂಧ ಪಟ್ಟ ಚುನಾವಣಾ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಉತ್ತರ ಪ್ರದೇಶದ ಸ್ಥಳೀಯ ಚುನಾವಣೆಗಳು ನಾಲ್ಕು ಹಂತದಲ್ಲಿ ನಡೆಯಲಿದ್ದು ಮೊದಲ ಹಂತದ ಚುನಾವಣೆ ಏಪ್ರಿಲ್ 15 ರಿಂದ ಶುರುವಾಗಲಿದೆ. ಇನ್ನು ಕೊನೆಯ ಹಂತದ ಚುನಾವಣೆ 19, 26, 20ರಂದು ನಡೆಯಲಿದ್ದು, ಫಲಿತಾಂಶ ಮೇ 2 ರಂದು ಹೊರಬೀಳಲಿದೆ.