ಲಕ್ನೋ: ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿ ರಸ್ತೆಯಲ್ಲೇ ಆಕೆಗೆ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಬಂದಾದಲ್ಲಿ ನಡೆದಿರುವುದು ವರದಿಯಾಗಿದೆ.
ತ್ರಿವಳಿ ತಲಾಖ್ ಕಾಯ್ದೆ, ವರದಕ್ಷಿಣೆ ಕಿರುಕುಳ, ಕೊಲೆ ಯತ್ನಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ವ್ಯಕ್ತಿ(ಪತಿ) ಮತ್ತು ಅವರ ಕುಟುಂಬದ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2020 ರ ನವೆಂಬರ್ ನಲ್ಲಿ ನಮ್ಮ ವಿವಾಹವಾಗಿತ್ತು. ಮದುವೆಯ ಸಮಯದಲ್ಲಿ ತನ್ನ ತಂದೆ ವರದಕ್ಷಿಣೆಯಾಗಿ ನೀಡಿದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದರು. ಆದರೆ ಇದಾದ ಬಳಿಕ ಪತಿ ಮತ್ತು ಆತನ ಕುಟುಂಬದವರು ಹೆಚ್ಚಿನ ಹಣ ಕೇಳುತ್ತಲೇ ಇದ್ದರು. ಗಂಡ, ಅತ್ತೆ, ಅತ್ತಿಗೆ ಎಲ್ಲರೂ ವರದಕ್ಷಿಣೆ ವಿಚಾರದಲ್ಲಿ ಹಿಂಸೆ ನೀಡಲು ಆರಂಭಿಸಿದರು. ಆಗಲೂ ವರದಕ್ಷಿಣೆ ನೀಡಿದ್ದರು. ಆ ಬಳಿಕವೂ ಈಗ ಅವರು 2 ಲಕ್ಷ ರೂ. ಕೇಳುತ್ತಿದ್ದಾರೆ. ನನ್ನ ಅತ್ತೆ ಪತಿಯನ್ನು ಮರು ಮದುವೆಯಾಗುವಂತೆ ಹೇಳುತ್ತಿದ್ದಾರೆ. ನನ್ನ ಮಗು ಇವರ ದೌರ್ಜನ್ಯದಿಂದ ಹೊಟ್ಟೆಯಲ್ಲೇ ಮೃತಪಟ್ಟಿದೆ ಎಂದು ಘಟನೆ ಬಗ್ಗೆ ಪೊಲೀಸರ ಬಳಿ ಮಹಿಳೆ ಹೇಳಿದ್ದಾರೆ.
ಗರ್ಭಿಣಿಯಾಗಿದ್ದ ವೇಳೆ ನನ್ನ ಮೇಲೆ ಹಲ್ಲೆ ನಡೆಸಿ, ರಸ್ತೆಯಲ್ಲೇ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸದ್ಯ ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಯತ್ನಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.