ಲಕ್ನೋ: ಕಿರಿಯ ಸೊಸೆ ಜತೆ ಅನೈತಿಕ ಸಂಬಂಧ ಹೊಂದಿದ್ದ 55ವರ್ಷದ ಪತಿಯನ್ನು ಪತ್ನಿ ಹಾಗೂ ಹಿರಿಯ ಸೊಸೆ ಒಟ್ಟಿಗೆ ಸೇರಿ ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಭಾದೋಹಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶನಿವಾರ(ಡಿಸೆಂಬರ್ 12, 2020) ರಾತ್ರಿ ಕೊಯ್ ರಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ವ್ಯಕ್ತಿಯ ಪತ್ನಿ ಮತ್ತು ಹಿರಿಯ ಸೊಸೆ ಏಕಾಏಕಿ ಚೂರಿಯಿಂದ ಗಂಡನ ಗಂಟಲನ್ನು ಸೀಳಿ ಹಾಕಿರುವುದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬದಾನ್ ಸಿಂಗ್ ತಿಳಿಸಿದ್ದಾರೆ. ಕೂಡಲೇ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಅಷ್ಟರಲ್ಲಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.
ಈ ವ್ಯಕ್ತಿಗೆ ನಾಲ್ವರು ಗಂಡುಮಕ್ಕಳು. ಅವರೆಲ್ಲರೂ ವಲಸೆ ಕಾರ್ಮಿಕರಾಗಿ ಮುಂಬೈನಲ್ಲಿ ವಾಸವಾಗಿದ್ದರು. ಇವರಲ್ಲಿ ಇಬ್ಬರು ಗಂಡು ಮಕ್ಕಳಿಗೆ ಮದುವೆಯಾಗಿದ್ದು, ತಮ್ಮ ಪತ್ನಿಯನ್ನು ಹಳ್ಳಿಯಲ್ಲಿರುವ ಪೋಷಕರ ಜತೆ ಬಿಟ್ಟಿದ್ದರು ಎಂದು ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಮಾವ ಕಿರಿಯ ಸೊಸೆ ಜತೆ ದೈಹಿಕ ಸಂಬಂಧ ಹೊಂದಿದ್ದ. ಇದರ ಬಗ್ಗೆ ಪತ್ನಿ ಮತ್ತು ಹಿರಿಯ ಸೊಸೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಕಿರಿಯ ಸೊಸೆಯನ್ನು ಆಕೆಯ ಪೋಷಕರ ಮನೆಗೆ ಕಳುಹಿಸಿಕೊಟ್ಟಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
Related Articles
ಇದನ್ನೂ ಓದಿ:ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲೇ ಸಾರಿಗೆ ನೌಕರರ ಪ್ರತಿಭಟನೆ: 16 ಬಸ್ ಮಾತ್ರ ಸಂಚಾರ
ಇದರಿಂದ ಆಕ್ರೋಶಗೊಂಡ ಮಾವ ಕೆಲ ದಿನಗಳ ಹಿಂದೆ ಹಿರಿಯ ಸೊಸೆ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಗಲಾಟೆಯಲ್ಲಿ ಹಿರಿಯ ಸೊಸೆ ಮತ್ತು ಪತ್ನಿಯನ್ನು ಮನೆಯಿಂದ ಹೊರಹಾಕಿಬಿಟ್ಟಿದ್ದ. ಇದರಿಂದಾಗಿ ವ್ಯಕ್ತಿಯ ಪತ್ನಿ ಮತ್ತು ಹಿರಿಯ ಸೊಸೆ 100 ಮೀಟರ್ ದೂರದಲ್ಲಿರುವ ಮತ್ತೊಂದು ಮನೆಯಲ್ಲಿ ವಾಸವಾಗಿದ್ದರು.
ಸುಮಾರು ನಾಲ್ಕೈದು ದಿನದ ಹಿಂದೆ ಕಿರಿಯ ಸೊಸೆಯನ್ನು ಆಕೆಯ ತವರು ಮನೆಯಿಂದ ಮಾವ ವಾಪಸ್ ಮನೆಗೆ ಕರೆತಂದು ಜತೆಗೆ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಪತ್ನಿ ಮತ್ತು ಹಿರಿಯ ಸೊಸೆ ಮನೆಯೊಳಗೆ ನುಗ್ಗಿ ಚೂರಿಯಿಂದ ಗಂಟಲು ಸೀಳಿ ಹತ್ಯೆಗೈದಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಕಿರಿಯ ಸೊಸೆ ಪರಾರಿಯಾಗಿದ್ದು, ಪೊಲೀಸ್ ಠಾಣೆಗೆ ಬಂದು ಮಾವನನ್ನು ಕೊಲೆಗೈದ ವಿಷಯ ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಬಾಗಲಕೋಟೆಯಿಂದ ಉಡುಪಿಗೆ ಬಂದು ಬದುಕು ಕಟ್ಟಿಕೊಂಡ ಬಸವರಾಜ್ | Udayavani
ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತಿ ಕಿರಿಯ ಸೊಸೆ ಜತೆ ಅನೈತಿಕ ಸಂಬಂಧ ಹೊಂದಿದ್ದು ಪತ್ತೆಯಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಮಕ್ಕಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.