ಲಕ್ನೋ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ತಂದೆ ಸೇರಿದಂತೆ 28 ಮಂದಿಯನ್ನು ಬಂಧಿಸಿರುವ ಘಟನೆ ಉತ್ತರಪ್ರದೇಶದ ಲಲಿತ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಬಹುಜನ್ ಸಮಾಜ್ ಪಕ್ಷದ ಜಿಲ್ಲಾಧ್ಯಕ್ಷ ಸೇರಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ನಿಮ್ಮ ತಂದೆ ಕೂಡ ಪುಟಗೋಸಿ ಹುದ್ದೆಯಲ್ಲಿ ಇದ್ದದ್ದಾ? : ಎಚ್ ಡಿಕೆಗೆ ಸಿದ್ದರಾಮಯ್ಯ ಪ್ರಶ್ನೆ
ಆರನೇ ತರಗತಿಯಲ್ಲಿರುವಾಗಲೇ ತಂದೆ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದು, ಬಳಿಕ ಹಲವಾರು ಬಾರಿ ಅತ್ಯಾಚಾರ ಎಸಗಿರುವುದಾಗಿ ಮಾಹಿತಿ ನೀಡಿದ್ದಾಳೆ.
ಅಷ್ಟೇ ಅಲ್ಲ ವ್ಯವಹಾರದ ಉದ್ದೇಶದಿಂದ ಇತರರನ್ನು ದೂರವಾಣಿ ಕರೆ ಮಾಡಿ ಕರೆಯಿಸಿಕೊಂಡು, ಅವರ ಜತೆಯೂ ಲೈಂಗಿಕ ಚಟುವಟಿಕೆ ನಡೆಸುವಂತೆ ಬಲವಂತ ಮಾಡಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಅತ್ಯಾಚಾರ ಎಸಗಿದವರಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತಿಲಕ್ ಯಾದವ್ ಹಾಗೂ ಆತನ ಮೂವರು ಕಿರಿಯ ಸಹೋದರರು, ಬಿಎಸ್ಪಿ ಜಿಲ್ಲಾಧ್ಯಕ್ಷ ದೀಪಕ್ ಅಹಿವಾರ್, ಉಪಾಧ್ಯಕ್ಷ ನೀರಜ್ ತಿವಾರಿ ಹಾಗೂ ಆತನ ಕುಟುಂಬದ ಕೆಲವು ಸದಸ್ಯರು ಇದ್ದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ಹೇಳಿದೆ.
ಅತ್ಯಾಚಾರ ಎಸಗಿದ ವಿಷಯವನ್ನು ಬಹಿರಂಗಪಡಿಸಿದರೆ ತಾಯಿಯನ್ನು ಕೊಲ್ಲುವುದಾಗಿ ತಂದೆ ಬೆದರಿಕೆ ಒಡ್ಡಿರುವುದಾಗಿ ಸಂತ್ರಸ್ತೆ ದೂರಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ತಂದೆ ಹಾಗೂ ಇತರ 28 ಮಂದಿ ವಿರುದ್ಧ 354, 376ಡಿ, 323, 328, 506 ಹಾಗೂ 120 ಬಿ ಕಾಯ್ದೆಯಡಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆ ಅಪ್ರಾಪ್ತೆಯಾಗಿದ್ದು, ಆಕೆಗೆ ಸಹೋದರನೊಬ್ಬನಿದ್ದಾನೆ. ಆಕೆಯ ಎಲ್ಲಾ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದರಿಂದ ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಲಲಿತ್ ಪುರ್ ಎಎಸ್ ಪಿ ಗಿರಿಜೇಶ್ ಕುಮಾರ್ ತಿಳಿಸಿದ್ದಾರೆ.