ಕಾನ್ಪುರ್: ಮುಸ್ಲಿಮ್ ಯುವತಿಯನ್ನು ವಿವಾಹವಾಗುವ ನಿಟ್ಟಿನಲ್ಲಿ ಸ್ಥಳೀಯ ಹಿಂದೂ ಯುವಕನೊಬ್ಬ ಇಸ್ಲಾಮ್ ಗೆ ಮತಾಂತರಗೊಂಡು ಮದುವೆ(ನಿಖಾಃ)ಯಾದ ವಿಡಿಯೋವೊಂದು ವೈರಲ್ ಆಗಿದ್ದು, ಈ ಬಗ್ಗೆ ಉತ್ತರಪ್ರದೇಶದ ಕಾನ್ಪುರ್ ಪೊಲೀಸರು ತನಿಖೆಗೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Shivaganga giri: ಮದುವೆ ವಿಡಿಯೋದಲ್ಲಿ ಸೆರೆಯಾಯಿತು ಚಿರತೆಗಳು; ವಿಡಿಯೋ ನೋಡಿ
ಕೆಲವು ತಿಂಗಳ ಹಿಂದೆ ಈ ವಿವಾಹ ನಡೆದಿದ್ದು, ನಾವು ವಿವಾಹಿತ ಜೋಡಿಯ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವುದಾಗಿ ಚೌಬೇಪುರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂಜಯರ್ ಪಾಂಡೆ ತಿಳಿಸಿರುವುದಾಗಿ ವರದಿಯಾಗಿದೆ.
ಕ್ರಮ ತೆಗೆದುಕೊಳ್ಳಲು ವಿಎಚ್ ಪಿ ಆಗ್ರಹ:
ಹಿಂದೂ ಯುವಕ ಇಸ್ಲಾಮ್ ಗೆ ಮತಾಂತರಗೊಂಡ ಪ್ರಕರಣದಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಂಚಾಲಕ ವಿಪಿನ್ ಶುಕ್ಲಾ ನೇತೃತ್ವದಲ್ಲಿ ಚೌಬೇಪುರ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಒತ್ತಾಯಿಸಿರುವುದಾಗಿ ವರದಿ ವಿವರಿಸಿದೆ.
ತನಿಖೆ ನಡೆಯುತ್ತಿದೆ:
ಹಿಂದೂ ಯುವಕ ಮತಾಂತರಗೊಂಡು, ಮುಸ್ಲಿಮ್ ಯುವತಿಯನ್ನು ವಿವಾಹವಾದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಇದರ ಹಿಂದೆ ಪಿತೂರಿ ಇದ್ದಿರುವುದಾಗಿ ಶುಕ್ಲಾ ತಿಳಿಸಿದ್ದಾರೆ. ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಈ ವಿವಾಹ ನಾಲ್ಕು ತಿಂಗಳ ಹಿಂದೆ ನಡೆದಿರುವುದಾಗಿ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಹಿಂದೂ ಯುವಕ ಮತ್ತು ಮುಸ್ಲಿಮ್ ಯುವತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಈ ಮೊದಲು ಹಿಂದೂ ಸಂಪ್ರದಾಯದಂತೆ ವಿವಾಹವಾಗಿತ್ತು. ಆದರೆ ನಂತರ ಹಿಂದೂ ಯುವಕ ಮತಾಂತರಗೊಂಡು ಇಸ್ಲಾಮ್ ಸಂಪ್ರದಾಯದಂತೆ ವಿವಾಹವಾಗಿರುವುದಾಗಿ ವರದಿ ವಿವರಿಸಿದೆ.