ಲಕ್ನೋ: ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕೆಲವೇ ಗಂಟೆಯಲ್ಲಿ ಹಸೆಮಣೆ ಏರಬೇಕಿದ್ದ ವರ ಸೇರಿ ನಾಲ್ವರು ಸಾವನ್ನಪ್ಪಿರುವ ದುರಂತ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಶುಕ್ರವಾರ(ಮೇ.10 ರಂದು) ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ವರ ಆಕಾಶ್ (24) ಮತ್ತು ಆತನ ಸಂಬಂಧಿಕರು ಕಾರಿನಲ್ಲಿ ಮದುವೆ ಸ್ಥಳಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ವಧುವಿನ ಮನೆಯಿಂದ 10 ಕಿಲೋಮೀಟರ್ ದೂರದಲ್ಲಿ ಮದುವೆ ಮೆರವಣಿಗೆ ಛಾಪ್ರಾ ಕಡೆಗೆ ಹೋಗುತ್ತಿದ್ದಾಗ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಸಿಎನ್‌ಜಿ ಟ್ಯಾಂಕ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡಿದೆ. ಇದರಿಂದ ಕಾರಿನಲ್ಲಿದ್ದ ಕಾರಿನಲ್ಲಿದ್ದ ಆಕಾಶ್ ಅಹಿರ್ವಾರ್ (25), ಅವರ ಸಹೋದರ ಆಶಿಶ್ (20), 7 ವರ್ಷದ ಸೋದರಳಿಯ ಮತ್ತು ಚಾಲಕ ಜೈಕರನ್ ಸುಟ್ಟು ಕರಕಲಾಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.
ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿರುವ ಟ್ರಕ್ ಚಾಲಕನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.