ಲಕ್ನೋ:ಉತ್ತರಪ್ರದೇಶದ ಹತ್ರಾಸ್ ನಲ್ಲಿ 20ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಏತನ್ಮಧ್ಯೆ, ರಾಜ್ಯದಲ್ಲಿ ಎಲ್ಲಾ ತಾಯಿಯಂದಿರ, ಸಹೋದರಿಯರ ರಕ್ಷಣೆ, ಭದ್ರತೆ ಮತ್ತು ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
“ಉತ್ತರಪ್ರದೇಶದಲ್ಲಿ ತಾಯಿಯಂದಿರಿಗೆ ಮತ್ತು ಮಗಳಿಗೆ ಕಿರುಕುಳ ನೀಡಿದರೆ ಏನಾಗಬಹುದು ಎಂಬುದನ್ನು ಆಲೋಚಿಸಿರಲಿಕ್ಕಿಲ್ಲ. ಆರೋಪಿಗಳಿಗೆ ಅಂತಹ ಶಿಕ್ಷೆ ಸಿಗಲಿದೆ, ಮತ್ತೆ ಇದು ಭವಿಷ್ಯದಲ್ಲಿ ಒಂದು ಉದಾಹರಣೆಯಾಗಿ ನಿಲ್ಲಬಲ್ಲದು. ರಾಜ್ಯದಲ್ಲಿರುವ ಎಲ್ಲಾ ತಾಯಂದಿರ, ಸಹೋದರಿಯರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಇದು ನಮ್ಮ ಕರ್ತವ್ಯ ಮತ್ತು ಭರವಸೆಯಾಗಿದೆ ಎಂದು ಸಿಎಂ ಹಿಂದಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ವಿಡಿಯೋ ಕರೆ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ್ರಸ್ತೆ ಕುಟುಂಬ ಸದಸ್ಯರ ಜತೆ ಮಾತನಾಡಿದ್ದ ವೇಳೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅಲ್ಲದೇ ಎಲ್ಲಾ ರೀತಿಯ(25 ಲಕ್ಷ ರೂಪಾಯಿ ಪರಿಹಾರ, ಮನೆ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ) ನೆರವು ನೀಡುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ:ನನಗೆ ಸೋಂಕು ತಾಗಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುವೆ ಎಂದ ಬಿಜೆಪಿ ನಾಯಕನಿಗೆ ಸೋಂಕು
ಸೆಪ್ಟೆಂಬರ್ 14ರಂದು ನಡೆದ ಅತ್ಯಾಚಾರ ಘಟನೆ ನಂತರ ರಾಜ್ಯದಲ್ಲಿ ಮತ್ತೆ ಎರಡು ಅತ್ಯಾಚಾರ ಪ್ರಕರಣ ನಡೆದಿತ್ತು. ನಂತರ ಪೈಶಾಚಿಕ ಕೃತ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗತೊಡಗಿತ್ತು.
ಈ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡಬೇಕೆಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಒತ್ತಾಯಿಸಿದ್ದು, ಉತ್ತರಪ್ರದೇಶದಲ್ಲಿ ನ್ಯಾಯವನ್ನು ನಿರೀಕ್ಷಿಸುವಂತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಷ್ಟ್ರಪತಿ ಆಡಳಿತ ಹೇರುವಂತೆ ಒತ್ತಾಯಿಸಿದ್ದರು.