ಸಹರಾನ್ಪುರ: ಉತ್ತರ ಪ್ರದೇಶದ ದಾರುಲ್ ಉಲೂಮ್, ದಿಯೋಬಂದ್ ನಲ್ಲಿ ಮದರಸಾಗಳ ಸಮಾವೇಶ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯದ ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ ನಡೆಸುವ ವಿಚಾರದಲ್ಲಿ ಮದರಸಾಗಳಿಂದ ಯಾವುದೇ ಆಕ್ಷೇಪವಿಲ್ಲ ಎಂದು ಜಮೀಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಭಾನುವಾರ ಹೇಳಿದ್ದಾರೆ.
ಮದರಸಾಗಳ ಸರ್ವೆ ಮಾಡಲು ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ನಾವು ಉಲೇಮಾಗಳಿಗೆ (ಮದರಸಾ ಉಸ್ತುವಾರಿ) ಸರಿಯಾದ ಮಾಹಿತಿ ನೀಡಲು ಸೂಚಿಸಿದ್ದೇವೆ. ಜನರು ಈ ಸರ್ವೆಗೆ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.
ಈ ಸರ್ವೆಯ ಬಗ್ಗೆ ಮುಸ್ಲಿಂ ಸಮುದಾಯ ಯಾವುದೇ ಕೋಪವನ್ನು ಹೊಂದಿಲ್ಲ. ನಾವು ಮುಸ್ಲಿಮರಿಂದ ದೇಣಿಗೆ ಸಂಗ್ರಹಿಸಿ ಮದರಸಾಗಳನ್ನು ನಡೆಸುತ್ತೇವೆ. ಯಾವುದೇ ಮದರಸಾಗಳಲ್ಲಿ ಯಾವುದಾದರೂ ಮಗುವಿಗೆ ಹಿಂಸೆ ನೀಡಲಾಗುತ್ತಿದೆಯೇ ಎಂದು ಯಾರು ಬೇಕಾದರೂ ಬಂದು ನೋಡಬಹುದು. ನಿಮಗೆ ಮದರಸಾಗಳಲ್ಲಿ ಏನಾದರೂ ತಪ್ಪು ಕಂಡರೆ ನೀವು ಕೂಡಲೇ ಮುಚ್ಚಬಹುದು ಎಂದು ಮೌಲಾನಾ ಅರ್ಷದ್ ಮದನಿ ಹೇಳಿದ್ದಾರೆ.
ಇದನ್ನೂ ಓದಿ:ಟೀಚರ್ ನನ್ನ ಚಿತ್ರ ಬಿಡಿಸಿ ಎಂದರೆ ಈ ಮಕ್ಕಳು ಯಾರ ಚಿತ್ರ ಬಿಡಿಸಿದ್ದಾರೆ ನೋಡಿ: ಫೋಟೋ ವೈರಲ್
ಒಂದು ವೇಳೆ ಮದರಸಾ ಸರ್ಕಾರಿ ಜಾಗದಲ್ಲಿದ್ದರೆ ಅದನ್ನು ಕೆಡವಲು ಸರ್ಕಾರ ಎಲ್ಲಾ ಹಕ್ಕು ಹೊಂದಿದೆ. ಆದರೆ ಮದರಸಾ ಅದರದೇ ಜಾಗದಲ್ಲಿದ್ದರೆ ನಾವು ಅದರ ವಿರುದ್ಧವಿದ್ದೇವೆ ಎಂದಿದ್ದಾರೆ.
ಮದರಸಾಗಳು ತಮ್ಮ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಮತ್ತು ಕಾಲಕಾಲಕ್ಕೆ ಲೆಕ್ಕಪರಿಶೋಧನೆ ನಡೆಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು. ದಿನನಿತ್ಯದ ಧಾರ್ಮಿಕ ಕಾರ್ಯಗಳಿಗೆ ಮದರಸಾಗಳು ಸರ್ಕಾರದಿಂದ ಸಹಾಯ ಪಡೆಯುವುದಿಲ್ಲ ಎಂದ ಮದನಿ, ಶಾಲಾ-ಕಾಲೇಜುಗಳನ್ನು ನಿರ್ಮಿಸಲು ಸರ್ಕಾರ ಸಹಾಯ ಮಾಡಬಹುದು ಎಂದು ಹೇಳಿದರು.