ಲಖನೌ: ಪಂಚ ರಾಜ್ಯಗಳಲ್ಲಿ ಬಿಜೆಪಿ ಜಯಕ್ಕೆ ಪ್ರಧಾನಿ ಮೋದಿ ಅಲೆ ಮತ್ತು ಅಮಿತ್ ಶಾ ಅವರ ಚಾಣಾಕ್ಷ ನಿರ್ಣಯ, ಕಾರ್ಯತಂತ್ರ ಹಾಗೂ ನಡೆಗಳು ಕಾರಣ ಎಂದು ದೇಶಕ್ಕೆ ದೇಶವೇ ಕೊಂಡಾಡುತ್ತಿದೆ. ಆದರೆ ಈ ಜಯ ಸಾಧ್ಯವಾದದ್ದು ತಮ್ಮಿಂದ ಅಲ್ಲ ಎನ್ನುವ ಮೂಲಕ ಬಿಜೆಪಿ ಮುಖಂಡ ಅಮಿತ್ ಶಾ ಅಚ್ಚರಿ ಮೂಡಿಸಿದ್ದಾರೆ.
ಅಲ್ಲದೆ ಈ ಚುನಾವಣೆಗಳಲ್ಲಿ ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಯಾರು ಕಾರಣ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. “”2017ರ ಯುದ್ಧದ ಅಸಲಿ ಹೀರೊ ಸುನೀಲ್ ಬನ್ಸಲ್” ಎನ್ನುವ ಮೂಲಕ ಬಿಜೆಪಿಯ ಪ್ರಚಂಡ ಜಯದ ಸಂಪೂರ್ಣ ಶ್ರೇಯಸ್ಸನ್ನು ಅಮಿತ್ ಶಾ ಅವರು
ಬನ್ಸಲ್‌ಗೆ ನೀಡಿದ್ದಾರೆ. ಬೇರೆಯವರ ಮಾತು ಕೇಳುವ ವ್ಯವಧಾನವಿಲ್ಲದ ಬನ್ಸಲ್ ಒಬ್ಬ ನಿಷ್ಠುರವಾದಿ ಎಂದು ಈ ಹಿಂದೆ ಬಿಜೆಪಿಯ ಒಂದು ಬಣ ಅವರನ್ನು ಇನ್ನಿಲ್ಲದಂತೆ ವಿರೋಧಿಸಿತ್ತು. ಆದರೆ ಪಂಚರಾಜ್ಯಗಳ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸುನೀಲ್ ಬನ್ಸಲ್ ಸಾಬೀತು ಮಾಡಿದ್ದಾರೆ. ಚುನಾವಣೆಯಲ್ಲಿ ಬನ್ಸಲ್‌ರ ಶ್ರಮ-ಸಾಧನೆ ಮೆಚ್ಚಿದ ಅಮಿತ್ ಶಾ ಕೂಡ, ಅವರನ್ನೇ “ನಿಜವಾದ ಹೀರೊ’ ಎಂದು ಘೋಷಿಸಿದ್ದಾರೆ.
ಎಬಿವಿಪಿ ಕಟ್ಟಾಳು: ಹಿಂದೆ ಜೈಪುರದಲ್ಲಿ ಎಬಿವಿಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಬನ್ಸಲ್‌ರನ್ನು ಉ.ಪ್ರ.ಕ್ಕೆ ಕಳುಹಿಸಲು 2014ರಲ್ಲಿ ಆರ್‌ಎಸ್ ಎಸ್ ಮುಖಂಡರು ನಿರ್ಧರಿಸಿದರು. ಆಗ ಉತ್ತರಪ್ರದೇಶ ಉಸ್ತುವಾರಿಯಾಗಿದ್ದ ಬಿಜೆಪಿ ವರಿಷ್ಠ ಅಮಿತ್ ಶಾ ಅವರಿಗೆ ನೆರವಾಗುವುದು ಬನ್ಸಲ್‌ರ ಕೆಲಸವಾಗಿತ್ತು. ಈ ವೇಳೆ ನಡೆದ ಉತ್ತರ ಪ್ರದೇಶ ಲೋಕಸಭೆ ಚುನಾವಣೆ ಬನ್ಸಲ್‌ಗೆ ಉತ್ತಮ ಅನುಭವ ನೀಡಿತ್ತು. ಪ್ರಸ್ತುತ ಚುನಾವಣೆ ವೇಳೆ ಸಂಘಟನಾ ಕಾರ್ಯದರ್ಶಿಯಾಗಿ ಮತ್ತೆ ಉತ್ತರ ಪ್ರದೇಶಕ್ಕೆ ತೆರಳಿದ ಬನ್ಸಲ್, ರಾಜ್ಯಮಟ್ಟದಿಂದ ಬೂತ್ ಮಟ್ಟದವರೆಗೆ ಸುಮಾರು ಸಾವಿರ ಮಂದಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಪದಾಧಿಕಾರಿಗಳನ್ನು ನೇಮಿಸಿದರು.
ಈ ಪೈಕಿ ತಂತ್ರಜ್ಞಾನದಲ್ಲಿ ನೈಪುಣ್ಯ ಹೊಂದಿರುವ ಹಾಗೂ ಪಕ್ಷಕ್ಕಾಗಿ ಎಂಥದ್ದೇ ತ್ಯಾಗಕ್ಕೆ ಸಿದಟಛಿರಿರುವ 150 ಸ್ಥಳೀಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪಕ್ಷದ ನಿತ್ಯದ ಚಟುವಟಿಕೆಗಳನ್ನು ಗಮನಿಸುವಂತೆ ಸೂಚಿಸಿದರು. ರಾಜ್ಯದಲ್ಲಿ 2 ಕೋಟಿ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಲಾಯಿತು. ಇಲ್ಲಿಂದ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿದ ಬನ್ಸಲ್, ರಾಜ್ಯದಲ್ಲಿ ಬಿಜೆಪಿಗೆ ಪ್ರಚಂಡ ಜಯ ತಂದಿತ್ತರು.