ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ಆರಂಭವಾಗಿದೆ. ರೈತರ ಪ್ರತಿಭಟನೆ ವೇಳೆ ಬಹಳಷ್ಟು ಸದ್ದು ಮಾಡಿದ್ದ ಲಖೀಂಪುರದಲ್ಲಿಯೂ ಇಂದು ಮತದಾನ ನಡೆಯುತ್ತಿದೆ.
ಉತ್ತರ ಪ್ರದೇಶದ ಫಿಲಿಭಿತ್, ಲಖೀಂಪುರ್ ಖೇರಿ, ಸೀತಾಪುರ, ಹರ್ದೊಯ್, ಉನ್ನಾವೋ, ಲಕ್ನೋ, ರಾಯ್‌ಬರೇಲಿ, ಬಂದಾ, ಮತ್ತು ಫತೇಪುರ ಜಿಲ್ಲೆಗಳ 59 ಕ್ಷೇತ್ರಗಳಲ್ಲಿ ಬುಧವಾರ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ.
ಇವುಗಳಲ್ಲಿಲಖೀಂಪುರ್ ಖೇರಿ ಕ್ಷೇತ್ರ ಅತೀ ಮಹತ್ವದ್ದು. ಕಳೆದ ವರ್ಷ, ಬಿಜೆಪಿ ನಾಯಕ ಅಜಯ್ ಕುಮಾರ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ, ಮುಷ್ಕರ ನಿರತ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರು ಸೇರಿ 8 ಮಂದಿಯ ಸಾವಿಗೆ ಕಾರಣರಾದರೆಂಬ ಆರೋಪವಿದೆ. ಹಾಗಾಗಿ ಈ ಕ್ಷೇತ್ರ ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಹೀಗಾಗಿ ಈ ಕ್ಷೇತ್ರ ಅತೀ ಪ್ರಾಮುಖ್ಯ ಪಡೆದಿದೆ.
ಲಖಿಂಪುರದ ಎಲ್ಲಾ 8 ಸ್ಥಾನಗಳು ಇದೀಗ ಬಿಜೆಪಿ ಬಳಿ ಇವೆ. ಬಿಜೆಪಿ ಮತ್ತು ಎಸ್‌ಪಿ ಎರಡೂ ಪಕ್ಷಗಳು ಲಖಿಂಪುರ ನಗರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಪುನರಾವರ್ತಿಸಿವೆ. 2017 ರ ಚುನಾವಣೆಯಲ್ಲಿ ಈ ಸ್ಥಾನವನ್ನು ಗೆದ್ದ ಬಿಜೆಪಿಯ ಯೋಗೇಶ್ ವರ್ಮಾ ಅವರು ಮತ್ತೆ ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ಮಧುರ್ ಅವರನ್ನು ಎದುರಿಸಲಿದ್ದಾರೆ. ಕಾಂಗ್ರೆಸ್ ರವಿಶಂಕರ್ ತ್ರಿವೇದಿ ಅವರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ:ಬಾಲಕನ ಶಸ್ತ್ರಚಿಕಿತ್ಸೆಗೆ 31 ಲಕ್ಷ ರೂ. ನೆರವು ನೀಡಿದ ಕೆ.ಎಲ್. ರಾಹುಲ್
624 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.13,813 ಮತದಾನ ಕೇಂದ್ರಗಳಲ್ಲಿ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಈ 59 ಕ್ಷೇತ್ರಗಳಲ್ಲಿ 2017 ರಲ್ಲಿ ಬಿಜೆಪಿ 51 ಸ್ಥಾನಗಳನ್ನು ಗೆದ್ದುಕೊಂಡಿತ್ತು. ನಾಲ್ಕು ಸಮಾಜವಾದಿ ಪಕ್ಷ, ಎರಡು ಕಾಂಗ್ರೆಸ್ ಮತ್ತು ಎರಡು ಸ್ಥಾನವನ್ನು ಮಾಯಾವತಿಯ ಬಹುಜನ ಸಮಾಜ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿಯ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೆಲಾಲ್) ಒಂದು ಸ್ಥಾನವನ್ನು ಗಳಿಸಿತ್ತು.
ಭದ್ರತೆಗಾಗಿ ಕೇಂದ್ರೀಯ ಅರೆಸೇನಾ ಪಡೆಗಳ 860 ಕಂಪನಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಉ.ಪ್ರ.ಪೊಲೀಸ್ ಇಲಾಖೆಯ 60 ಸಾವಿರ ಮಂದಿಯನ್ನೂ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ