ಬುಲಂದ್‌ಶಹರ್ : ಉತ್ತರ ಪ್ರದೇಶದ ಬುಲಂದ್‌ಶಹರ್ ನಲ್ಲಿ ಗೋಹತ್ಯೆ ವದಂತಿಯಿಂದ ಭುಗಿಲೆದ್ದ ಹಿಂಸೆಗೆ ಓರ್ವ ಸಬ್ ಇನ್ಸ್‌ಪೆಕ್ಟರ್ ಬಲಿಯಾದರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಎಸ್ ಐ ಮೃತಪಟ್ಟರೆಂದು ಬುಲಂದ್‌ಶಹರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಝಾ ತಿಳಿಸಿದ್ದಾರೆ.
ಅಕ್ರಮ ಕಸಾಯಿ ಖಾನೆಯಲ್ಲಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಕೆಲವು ಸ್ಥಳೀಯ ನಿವಾಸಿಗಳು ಪ್ರತಿಭಟನೆಗಿಳಿದಾಗ ಹಿಂಸೆ ನ್ಪೋಟಿಸಿತು. ಪ್ರತಿಭಟನಕಾರರು ವಾಹನಗಳ ಮೇಲೆ ಕಲ್ಲೆಸೆದು ಹಲವು ಮೋಟಾರ್ ಬೈಕ್‌ಗಳಿಗೆ ಬೆಂಕಿ ಹಚ್ಚಿದರು.
ಐಎಎನ್‌ಎಸ್ ವರದಿಯ ಪ್ರಕಾರ ಹಿಂದೂ ಸಂಘಟನೆಯ ಹಲವು ಸದಸ್ಯರು ದನದ ಶವವವನ್ನು ಮುಂದಿಟ್ಟುಕೊಂಡು ಬುಲಂದ್‌ಶಹರ್ ಸಿಯಾನಾ ರಸ್ತೆಯಲ್ಲಿ ಜಮಾಯಿಸಿ ಪೊಲೀಸ್ ಸಿಬಂದಿಗಳ ಮೇಲೆ ಕಲ್ಲೆಸೆದರು.
ಹಿಂದು ಯುವ ವಾಹಿನಿ ಮತ್ತು ಬಜರಂಗ ದಳದ ಕಾರ್ಯಕರ್ತರು ಹಲವು ಮೋಟಾರು ವಾಹನಗಳಿಗೆ ಹಾನಿಗೈದು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದರು.
ಈ ಹಿಂಸೆಯಲ್ಲಿ ಸಿಯಾನಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಬೋಧ್ ಸಿಂಗ್ ಮತ್ತು ಇತರ ನಾಲ್ವರು ಕಾನ್‌ಸ್ಟೆಬಲ್‌ಗಳು ಗಾಯಗೊಂಡರು. ಆದರೆ ತೀವ್ರವಾಗಿ ಗಾಯಗೊಂಡ ಇನ್ಸ್‌ಪೆಕ್ಟರ್ ಸುಬೋಧ್ ಸಿಂಗ್ ಅವರನ್ನು ಔರಂಗಾಬಾದ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತಾದರೂ ಅಷ್ಟರೊಳಗಾಗಿಯೇ ಅವರು ಕೊನೆಯುಸಿರೆಳೆದಿದ್ದರು.