ಫಿರೋಜಾಬಾದ್: ಪೊಲೀಸ್ ಮೆಸ್ ನಲ್ಲಿ ಸಿಗುವ ಆಹಾರದ ಬಗ್ಗೆ ಪೊಲೀಸ್ ಪೇದಯೊಬ್ಬರು ಅಸಮಾಧಾನ ತೋರಿದ್ದು, ಜನರನ್ನು ಕರೆದು ಆಹಾರದ ಗುಣಮುಟ್ಟದ ಬಗ್ಗೆ ಅಳುತ್ತಾ ಹೇಳುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದಿದೆ.
ತಟ್ಟೆಯಲ್ಲಿ ದಾಲ್, ರೋಟಿ ಮತ್ತು ಅನ್ನವನ್ನು ಹಿಡಿದುಕೊಂಡು ರಸ್ತೆಗೆ ಬಂದು ಊಟದ ಬಗ್ಗೆ ಗದ್ಗದಿತನಾಗಿ ಹೇಳುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಕಾನ್ ಸ್ಟೇಬರ್ ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಹಿರಿಯ ಅಧಿಕಾರಿಗಳು ಈತನನ್ನು ಸಮಾಧಾನ ಪಡಿಸಿ ಠಾಣೆಯೊಳಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವ ದೃಶ್ಯವೂ ಸೆರೆಯಾಗಿದೆ.
ಆಹಾರದ ಕಳಪೆ ಗುಣಮಟ್ಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿತ್ತಾದರೂ ಅವರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮನೋಜ್ ಕುಮಾರ್ ದೂರಿದ್ದಾರೆ.
ಆದರೆ ನನಗೆ ಬೆದರಿಕೆಯೊಡ್ಡಲಾಗಿದೆ. ನನ್ನನ್ನು ಕೆಲಸದಿಂದ ತೆಗೆಯಲಾಗುವುದು ಎಂದು ಹೆದರಿಸಲಾಗಿತ್ತು ಎಂದು ಮನೋಜ್ ಹೇಳಿದ್ದಾರೆ. ಪೊಲೀಸರಿಗೆ ಉತ್ತಮ ಗುಣಮಟ್ಟದ, ಪೌಷ್ಟಿಕ ಆಹಾರವನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಆದರೆ ಇಷ್ಟೆಲ್ಲಾ ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ ನಮಗೆ ಸಿಗುವುದು ಇದುವೇ ಎಂದು ತಮ್ಮ ತಟ್ಟೆ ತೋರಿಸುತ್ತಾರೆ.
ಡಿವೈಡರ್ ಮೇಲೆ ಕುಳಿತ ಮನೋಜ್ ಕುಮಾರ್ ಊಟದ ತಟ್ಟೆ ಹಿಡಿದು ‘ಇಂತಹ ಆಹಾರವನ್ನು ಪ್ರಾಣಿಯೂ ಸಹ ತಿನ್ನುವುದಿಲ್ಲ” ಎಂದಿರುವುದು ಮತ್ತೊಂದು ವಿಡಿಯೋದಲ್ಲಿ ಸೆರೆಯಾಗಿದೆ.
ಫಿರೋಜಾಬಾದ್ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮನೋಜ್ ಕುಮಾರ್ ಅವರು ಈ ಹಿಂದೆಯೂ ಅಶಿಸ್ತಿನ ವರ್ತನೆಗಾಗಿ ಶಿಕ್ಷೆ ಅನುಭವಿಸಿದ್ದರು. ಅವರಿಗೆ ಇದುವರೆಗೆ 15 ಬಾರಿ ಶಿಕ್ಷೆಯಾಗಿದೆ. ಈ ಘಟನೆಯ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.