ಲಕ್ನೋ:ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಪರಿಣಾಮ ತನ್ನ ತಂದೆಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಸೋಮವಾರ ಬೆಳಗ್ಗೆ ದಿಲ್ಲಿಯ ಏಮ್ಸ್ (ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್)ನಲ್ಲಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಷಟ್(89ವರ್ಷ) ನಿಧನರಾಗಿದ್ದರು ಎಂದು ವರದಿ ತಿಳಿಸಿದೆ. ಲಾಕ್ ಡೌನ್ ಜಾರಿಯಲ್ಲಿರುವ ನಿಟ್ಟಿನಲ್ಲಿ ತಂದೆಯ ಅಂತಿಮ ಸಂಸ್ಕಾರದ ವೇಳೆ ಅತೀ ಕಡಿಮೆ ಪ್ರಮಾಣದಲ್ಲಿ ಜನರು ಪಾಲ್ಗೊಳ್ಳಬೇಕು ಎಂದು ಸಿಎಂ ಯೋಗಿ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಇಂದು ಬೆಳಗ್ಗೆ 10.44ಕ್ಕೆ ವಿಧಿವಶರಾಗಿದ್ದು, ತೀವ್ರ ಸಂತಾಪ ಸೂಚಿಸಿರುವುದಾಗಿ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಾನಿಶ್ ಕೆ ಅವಾಸ್ಥಿ ತಿಳಿಸಿದ್ದಾರೆ.
89ವರ್ಷದ ಬಿಷಟ್ ಅವರು 1991ರಲ್ಲಿ ಅರಣ್ಯಾಧಿಕಾರಿ ಹುದ್ದೆಯಿಂದ ನಿವೃತ್ತರಾಗಿದ್ದರು. ಬಹುಅಂಗಾಂಗ ವೈಫಲ್ಯದ ಹಿನ್ನೆಲೆಯಲ್ಲಿ ಸಿಂಗ್ ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಮಾರ್ಚ್ 13ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ವೆಂಟಿಲೇಟರ್ ನಲ್ಲಿ ಇದ್ದಿರುವುದಾಗಿ ಹೇಳಿದರು.
ಸಿಎಂ ಯೋಗಿ ಅವರ ತಂದೆ ನಿಧನಕ್ಕೆ ಉತ್ತರಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್, ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.