ಲಕ್ನೋ: ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ(ಫೆ.24) ತಿಳಿಸಿದ್ದಾರೆ.
ಇದನ್ನೂ ಓದಿ:ಸ್ನಾನದ ವಿಡಿಯೋ, ಖಾಸಗಿ ಫೋಟೋ ಲೀಕ್.. ನಟಿ ತ್ರಿಶಾ ಸುತ್ತ ಸಾಗಿದ ವಿವಾದ ಒಂದೆರೆಡಲ್ಲ..
ಸಿಎಂ ಯೋಗಿ ಅವರು “ಎಕ್ಸ್” ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಯನ್ನು ರದ್ದುಪಡಿಸಿದ್ದು, ಮುಂದಿನ ಆರು ತಿಂಗಳೊಳಗೆ ಮತ್ತೆ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷೆಗಳ ಭದ್ರತೆ ಮತ್ತು ಸಮಗ್ರತೆ ಬಗ್ಗೆ ಯಾವುದೇ ರಾಜೀ ಇಲ್ಲ. ಯಾರು ವಿದ್ಯಾರ್ಥಿಗಳ ಜೀವನ ಜತೆ ಚೆಲ್ಲಾಟವಾಡುತ್ತಾರೋ ಅಂತಹ ದುಷ್ಕರ್ಮಿಗಳಿಗೆ ಕಠಿನ ಶಿಕ್ಷೆ ವಿಧಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಫೆಬ್ರವರಿ 17 ಮತ್ತು 18ರಂದು ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆ ನಡೆದಿತ್ತು. ಪರೀಕ್ಷೆಗಳ ಪಾವಿತ್ರ್ಯತೆ ಬಗ್ಗೆ ಯಾವುದೇ ರಾಜಿ ಇಲ್ಲ. ಯಾರು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೋ ಅವರ ವಿರುದ್ಧ ಕಠಿನ ಕ್ರಮ ಜರುಗಿಸುವುದಾಗಿ ಸಿಎಂ ಯೋಗಿ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಗೃಹ ಇಲಾಖೆ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಆದೇಶ ಹೊರಡಿಸಿದೆ. ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈಗಾಗಲೇ ನಡೆದ ಪರೀಕ್ಷೆಯನ್ನು ರದ್ದುಪಡಿಸಿರುವುದಾಗಿ ಆದೇಶದಲ್ಲಿ ತಿಳಿಸಿದೆ.