ಲಕ್ನೋ: ಆಯುಷ್ಮಾನ್ ಖುರಾನಾ ಅಭಿನಯಿಸಿರುವ “ಬಾಲಾ” ಹಾಗೂ ಒಂದು ಮೊಟ್ಟೆಯ ಕಥೆ ಸಿನಿಮಾದ ಘಟನೆಯನ್ನು ನೆನಪಿಸುವ ಘಟನೆಯೊಂದು ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಘಟನೆ:
ವಿವಾಹ ಸಂಭ್ರಮದಲ್ಲಿದ್ದ ವರ ತರಾತುರಿಯಲ್ಲಿ ಮಂಟಪದತ್ತ ಬರುತ್ತಿದ್ದ ವೇಳೆ ತಲೆಸುತ್ತು ಬಂದು ನೆಲದ ಮೇಲೆ ಬಿದ್ದು ಬಿಟ್ಟಿದ್ದ. ಈ ಸಂದರ್ಭದಲ್ಲಿ ವರನ ತಲೆಯಲ್ಲಿದ್ದ ವಿಗ್ ಕಳಚಿಬಿದ್ದ ಪರಿಣಾಮ, ಬೋಳು ತಲೆಯ ವಿಚಾರ ಬಹಿರಂಗವಾಗಿತ್ತು. ಮದುವೆ ಮಾತುಕತೆ ಸಂದರ್ಭದಲ್ಲಿ ವರ ವಧುವಿನ ಮನೆಯವರ ಬಳಿ ಬೋಳು ತಲೆಯ ವಿಚಾರವನ್ನು ಮುಚ್ಚಿಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೆಡವಿದ ದೇವಾಲಯಗಳ ಪುನರ್ ನಿರ್ಮಾಣದಲ್ಲಿ ತಪ್ಪೇನಿದೆ : ಗೋವಾ ಸಿಎಂ ಸಾವಂತ್
ತನ್ನ ಭಾವಿ ಪತಿಯ ತಲೆ ಬೋಳು ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ವಧು ವಿವಾಹವಾಗಲು ನಿರಾಕರಿಸಿರುವ ಘಟನೆ ಉನ್ನಾವೋದಲ್ಲಿ ನಡೆದಿದೆ. ಕುಟುಂಬ ಸದಸ್ಯರು, ಸಂಬಂಧಿಕರು ವಧುವಿನ ಮನವೊಲಿಸಲು ಪ್ರಯತ್ನಿಸಿದರು ಕೂಡಾ ಆಕೆ ತನ್ನ ನಿರ್ಧಾರವನ್ನು ಬದಲಿಸಲು ಒಪ್ಪಲಿಲ್ಲ ಎಂದು ವರದಿ ವಿವರಿಸಿದೆ.
ಮದುವೆ ಮಂಟಪದಲ್ಲಿ ವಿವಾಹ ಮುರಿದು ಬೀಳುತ್ತಿದ್ದಂತೆಯೇ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೂ ವಧು ಬೋಳು ತಲೆ ವರನನ್ನು ವಿವಾಹವಾಗಲು ನಿರಾಕರಿಸಿರುವುದಾಗಿ ವರದಿ ತಿಳಿಸಿದೆ.
ಇದಾದ ನಂತರ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ಮದುವೆಗೆ 5.66 ಲಕ್ಷ ರೂಪಾಯಿ ಖರ್ಚಾಗಿದ್ದು, ಅದನ್ನು ತಮಗೆ ವಾಪಸ್ ನೀಡಬೇಕೆಂದು ವಧುವಿನ ಕುಟುಂಬ ಸದಸ್ಯರು ಬೇಡಿಕೆ ಇಟ್ಟಿದ್ದರು. ಬಳಿಕ ವರನ ಕಡೆಯವರು ವಧುವಿನ ತಂದೆಗೆ ಹಣವನ್ನು ವಾಪಸ್ ನೀಡಿರುವುದಾಗಿ ವರದಿ ವಿವರಿಸಿದೆ.