ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆ ಸ್ಪರ್ಧೆಗೆ 85ರ ಹರೆಯದ ಹಿರಿಯ ಬಿಜೆಪಿ ನಾಯಕ ಮುರಲೀ ಮನೋಹರ್ ಜೋಷಿ ಅವರನ್ನು ಬಿಜೆಪಿ ಕೈಬಿಟ್ಟಿದೆ.
ಕೇಂದ್ರ ಸಚಿವೆ ಮೇನಕಾ ಗಾಂಧಿ ಮತ್ತು ಆಕೆಯ ಸಂಸದ ಪುತ್ರ ವರುಣ್ ಗಾಂಧಿ ಅವರು ತಮ್ಮ ಕ್ಷೇತ್ರಗಳನ್ನು ಪರಸ್ಪರ ವಿನಿಮಯಿಸಿಕೊಂಡಿದ್ದಾರೆ. ಅಂತೆಯೇ ಬಿಜೆಪಿ ಇಂದು ಉತ್ತರ ಪ್ರದೇಶದಿಂದ ಲೋಕಸಭೆಗೆ ಸ್ಪರ್ಧಿಸುವ 29 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಕೇಂದ್ರ ಸಚಿವ ಮನೋಜ್ ಸಿನ್ಹಾ 2014ರಲ್ಲಿ ಗೆದ್ದಿದ್ದ ಗಾಜೀಪುರ ಕ್ಷೇತ್ರದಿಂದ ಈ ಬಾರಿಯೂ ಸ್ಪರ್ಧಿಸಲಿದ್ದಾರೆ. ಉ.ಪ್ರ ಸರಕಾರದಲ್ಲಿ ಸಚಿವರಾಗಿರುವ ರೀಟಾ ಬಹುಗುಣ ಜೋಷಿ ಮತ್ತು ಸತ್ಯದೇವ್ ಪಚೌರಿ ಅವರು ಅನುಕ್ರಮವಾಗಿ ಪ್ರತಿಷ್ಠಿತ ಅಲಹಾಬಾದ್ ಮತ್ತು ಕಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ತನ್ನ ವಾರಾಣಸಿ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟು ಕಾನ್ಪುರದಿಂದ ಸ್ಪರ್ಧಿಸಿ ಗೆದ್ದಿದ್ದ ಮುರಲೀ ಮನೋಹರ ಜೋಷಿ ಅವರಿಗೆ ಮುಂದಿನ ಚುನಾವಣೆಗಳಲ್ಲಿನ್ನು ನಿಮ್ಮನ್ನು ಕಣಕ್ಕಿಳಿಸುವುದಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿತ್ತು.
ಜೋಷಿ ಅವರ ಹಾಗೆ ಈ ಬಾರಿ ಕೈಬಿಡಲಾಗಿರುವ ಬಿಜೆಪಿಯ ಇತರ ಕೆಲವು ಹಿರಿಯರಲ್ಲಿ ಎಲ್ ಕೆ ಆಡ್ವಾಣಿ, ಬಿ ಸಿ ಖಂಡೂರಿ ಮತ್ತು ಕಾಲರಾಜ್ ಮಿಶ್ರಾ ಮುಖ್ಯರಾಗಿದ್ದಾರೆ.
ನಿನ್ನೆ ಮಂಗಳವಾರ ನಟಿ ಜಯಪ್ರದಾ ಬಿಜೆಪಿ ಸೇರಿಕೊಂಡ ಮರುದಿನವೇ ಆಕೆಯನ್ನು ರಾಮಪುರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
ಯುಪಿ ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಅವರನ್ನು ಚಾಂದೋಲಿ ಕ್ಷೇತ್ರದಿಂದ ಈ ಬಾರಿಯೂ ಕಣಕ್ಕಿಳಿಸಲಾಗಿದೆ. ಮೇನಕಾ ಗಾಂಧಿ ಸುಲ್ತಾನ್‌ಪುರದಿಂದಲೂ ವರುಣ್ ಗಾಂಧಿ ಪಿಲಿಭೀತ್ ನಿಂದಲೂ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಇಂದು ಪಶ್ಚಿಮ ಬಂಗಾಲದಿಂದ ಸ್ಪರ್ಧಿಸುವ ತನ್ನ 10 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.