Advertisement

2017ರ ವರ್ಷಧಾರೆಗೆ ರೈತರ ಏಳು-ಬೀಳು

01:56 PM Dec 31, 2017 | Team Udayavani |

ರಾಯಚೂರು: 2017 ಯಾರಿಗೆ ಖುಷಿ ನೀಡಿದೆಯೋ ಬಿಟ್ಟಿದೆಯೋ ರೈತರಿಗೆ ಮಾತ್ರ ಅಕ್ಷರಶಃ ದುಃಖವನ್ನೇ ನೀಡಿದೆ. ಈ ವರ್ಷ ಎಡೆಬಿಡದೆ ಸುರಿದ ವರ್ಷಧಾರೆಗೆ ಇಳೆಯೆಲ್ಲ ತಂಪಾಯಿತು. ಆದರೆ, ಬೆಳೆಯೆಲ್ಲ ಕೊಚ್ಚಿ ಹೋಯಿತು.

Advertisement

ಸತತ ಎರಡು ತಿಂಗಳು ಬಿಟ್ಟು ಬಿಡದಂತೆ ಸುರಿದ ವರ್ಷಧಾರೆಗೆ ಬೆಳೆ ಮಾತ್ರವಲ್ಲದೇ ಆಸ್ತಿ ಪಾಸ್ತಿ ಕೂಡ ಹಾನಿಯಾಯಿತು. ಸರ್ಕಾರಕ್ಕೆ ಜಿಲ್ಲಾಡಳಿತ ನೀಡಿದ ವರದಿ ಪ್ರಕಾರ ಬೆಳೆ ಹಾನಿ ಹಾಗೂ ಆಸ್ತಿ ಪಾಸ್ತಿ ಸೇರಿ 58 ಕೋಟಿಗೂ ಅಧಿಕ ಹಾನಿ ಆಗಿದೆ. ಅದಾಗ ತಾನೆ ಬಿತ್ತನೆ ಮಾಡಿದ್ದ ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಗಳೆಲ್ಲ ಮಳೆಗೆ ಕೊಚ್ಚಿ ಹೋದವು. ಸಾವಿರಾರು ರೂ. ಖರ್ಚು ಮಾಡಿದ್ದ ರೈತರಿಗೆ ಆರಂಭದಲ್ಲೇ ನಷ್ಟದ ಭೀತಿ ಎದುರಾಯಿತು. ಇನ್ನೂ ಕೆಲವೆಡೆ ಬೆಳೆದು ನಿಂತಿದ್ದ ಹೊಲಗಳಲ್ಲೆಲ್ಲ ನೀರು ಸಂಗ್ರಹಗೊಂಡು ಬೆಳೆಯೆಲ್ಲ ಕೊಳೆತು ಹೋಯಿತು.

ಜೇಗರಕಲ್‌ ಮಲ್ಲಾಪುರ ರಸ್ತೆ ಸಂಪೂರ್ಣ ಕಡಿದು ಹೋಗಿ ಸಂಪರ್ಕವೇ ಇಲ್ಲದಾಯಿತು. ಸಾಕಷ್ಟು ಗ್ರಾಮಗಳಲ್ಲಿ ಸೇತುವೆಗಳು ಕೊಚ್ಚಿ ಹೋದ ಪರಿಣಾಮ ಗ್ರಾಮಕ್ಕೆ ತಿಂಗಳುಗಟ್ಟಲೇ ಸಂಪರ್ಕವೇ ಇಲ್ಲದಾಯಿತು. ಗಬ್ಬೂರು ಸಮೀಪದ ಮಸೀದಪುರದಲ್ಲಿ ಮಳೆಗೆ ಮನೆಗಳು ಕುಸಿದರೆ, ರಾಂಪುರದಲ್ಲಿ ಮನೆಗಳಲ್ಲೇ ನೀರಿನ ಜಲ ಚಿಮ್ಮಿತು. ಇನ್ನು ನಗರದ ಆಶ್ರಯ ಕಾಲೋನಿ, ಶಕ್ತಿನಗರದ ಲೇಬರ್‌ ಕಾಲೋನಿ ಅಕ್ಷರಶಃ ಜಲಾವೃತಗೊಂಡಿದ್ದವು.

ಇನ್ನೂ ಗದ್ದೆ ನಾಟಿ ಮಾಡಿದ್ದ ರೈತನ ಪರಿಸ್ಥಿತಿಯೂ ಭಿನ್ನವಾಗಿರಲ್ಲಿಲ್ಲ. ನೀರು ಅತಿಯಾಗಿ ಶೇಖರಣೆಗೊಂಡು ಬೆಳೆ ಕೊಚ್ಚಿ ಹೋಯಿತು. ಕೆಲವೆಡೆ ತೇವಾಂಶ ಹೆಚ್ಚಾಗಿ ಬೆಳೆ ಕೊಳೆಯಲು ಶುರುವಾಯಿತು. ಹಲವು ಗ್ರಾಮಗಳಲ್ಲಿ ಹಳೇ ಮನೆಗಳು ಕುಸಿದು ಜನ ಜಾನುವಾರುಗಳು ಜೀವ ಕಳೆದುಕೊಂಡರು. ಇನ್ನು ಬಸವಸಾಗರ ಜಲಾಶಯಕ್ಕೆ
ಹೆಚ್ಚುವರಿ ನೀರು ಬಂದ ಕಾರಣ 2.40 ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಸಲಾಯಿತು. ಇದರಿಂದ ನಡುಗಡ್ಡೆಗಳಿಗೆ ಮುಳುಗಡೆ ಭೀತಿ ಎದುರಾಗಿತ್ತು. ಈ ವೇಳೆ ಜಿಲ್ಲಾಡಳಿತ ನೆರವಿಗೆ ಧಾವಿಸಿತ್ತು. ಇನ್ನು ಇಂಥ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕಿನ ಗುಂಡಲಬಂಡಾ ಜಲಾಶಯಕ್ಕೆ ಆಗಮಿಸಿದ್ದ ಎಂಟು ಜನ ಪ್ರವಾಸಿಗರು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುವ ಭೀತಿಯಲ್ಲಿದ್ದರು. ಆದರೆ, ಸಕಾಲಕ್ಕೆ ಧಾವಿಸಿದ ಹಟ್ಟಿ ಪೊಲೀಸರು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಬರುತ್ತಿದ್ದ ಸಾರಿಗೆ ಬಸ್‌ ಕರ್ನೂಲ್‌ ಜಿಲ್ಲೆಯ ಪತ್ತಿಕೊಂಡ ಬಳಿ ಹಳ್ಳಕ್ಕೆ ಸಿಲುಕಿ ಪ್ರಯಾಣಿಕರು ಆಪತ್ತಿಗೆ ಸಿಲುಕಿದ್ದರು. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿ ಹೋಗಿತ್ತು. 

Advertisement

ವರುಣನ ಅಟ್ಟಹಾಸಕ್ಕೆ ಕಂಗೆಟ್ಟಿದ್ದ ರೈತರು ಸಾಲ ಮೈಮೇಲೆ ಎಳೆದುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು. ಆದರೆ, ಕೊನೆಗಳಿಗೆಯಲ್ಲಿ ತೊಗರಿ ಹಾಗೂ ಹತ್ತಿ ಇಳುವರಿ ತುಸು ಚೇತರಿಕೆ ಕಂಡ ಕಾರಣ ಸಮಾಧಾನವಾಗಿದೆ. ಆದರೆ, ಕೆಲ ರೈತರು ಮಾತ್ರ ನಷ್ಟದಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

2017 ರೈತರಿಗೆ ಕೆಟ್ಟ ಶಾಪವಾಗಿ ಪರಿಣಮಿಸಿದೆ. ಒಂದೆಡೆ ಅತೀವೃಷ್ಟಿ, ಮತ್ತೂಂದೆಡೆ ಅನಾವೃಷ್ಟಿಯಿಂದ ರೈತರು
ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಿದೆಯಾದರೂ ಅದು ಕೆಲವೇ ರೈತರಿಗೆ ಅನುಕೂಲವಾಗಿದೆ. ಕೇಂದ್ರ ಸರ್ಕಾರದಿಂದ ರೈತರಿಗೆ ನಯಾ ಪೈಸೆ ಉಪಯೋಗವಾಗಿಲ್ಲ. ಫಸಲ್‌ಬಿಮಾ
ಪರಿಹಾರ ಬಂದಿಲ್ಲ. 2018ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕು, ಸ್ವಾಮಿನಾಥನ್‌ ವರದಿ ಜಾರಿಗೊಳಿಸಬೇಕು. ಅಂದಾಗ ಮಾತ್ರ ರೈತರಿಗೆ ಅನುಕೂಲವಾಗಲಿದೆ.  ಚಾಮರಸ ಮಾಲಿಪಾಟೀಲ್‌, ರಾಜ್ಯ ಗೌರವಾಧ್ಯಕ್ಷ, ರಾಜ್ಯ ರೈತ ಸಂಘ 

Advertisement

Udayavani is now on Telegram. Click here to join our channel and stay updated with the latest news.

Next