Advertisement

ಅನರ್ಹ ಶಾಸಕರ ಸಭೆಯಲ್ಲಿ ಆತಂಕ

11:39 PM Sep 13, 2019 | Lakshmi GovindaRaju |

ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಳಂಬವಾಗುತ್ತಿರುವುದರಿಂದ ಆತಂಕಗೊಂಡಿರುವ ಅನರ್ಹ ಶಾಸಕರು ಶುಕ್ರವಾರ ಸಭೆ ನಡೆಸಿ ಚರ್ಚಿಸಿದ್ದಾರೆ. ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಸುಧಾಕರ್‌ ಅವರ ನಿವಾಸದಲ್ಲಿ ಸಭೆ ನಡೆಸಿದ ಅನರ್ಹರು, ಸುಪ್ರೀಂ ಕೋರ್ಟ್‌ ನಲ್ಲಿ ಪ್ರಕರಣ ವಿಳಂಬವಾಗುತ್ತಿರುವುದರಿಂದ ಮುಂದಿನ ನಡೆ ಏನು ಎನ್ನುವ ಕುರಿತು ಚರ್ಚೆ ನಡೆಸಿದ್ದಾರೆ.

Advertisement

ಪ್ರಕರಣದ ವಿಚಾರಣೆ ವಿಳಂಬವಾದರೆ, ತಾವು ಪ್ರತಿನಿಧಿಸಿದ್ದ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದರೆ, ಸ್ಪರ್ಧೆಗೆ ಕಾನೂನು ತೊಡಕಾಗುವ ಸಾಧ್ಯತೆ ಇರುವುದರಿಂದ ಆದಷ್ಟು ಬೇಗ ವಿಚಾರಣೆ ಕೈಗೆತ್ತಿಕೊಳ್ಳುವಂತೆ ವಕೀಲರ ಮೂಲಕ ಕೋರ್ಟ್‌ಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ ಸೆಪ್ಟೆಂಬರ್‌ 16 ರಂದು ಅನರ್ಹತೆ ಪ್ರಕರಣ ವಿಚಾರಣೆಗೆ ಪಟ್ಟಿ ಮಾಡಿದ್ದನ್ನು ರದ್ದುಪಡಿಸಲಾಗಿದೆ ಎಂಬ ಮಾಹಿತಿ ಅನರ್ಹ ಶಾಸಕರಿಗೆ ದೊರೆತಿದೆ ಎನ್ನಲಾಗಿದ್ದು, ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ, ಕೋರ್ಟ್‌ನಲ್ಲಿ ಹೋರಾಟ ನಡೆಸಲು ಬಿಜೆಪಿ ಸಹಕಾರ ನೀಡುತ್ತಿಲ್ಲ ಎಂಬ ಬೇಸರವೂ ಅವರಲ್ಲಿದೆ ಎನ್ನಲಾಗು ತ್ತಿದೆ. ಆರಂಭದಲ್ಲಿ ಬಿಜೆಪಿ ನಾಯಕರು ನೀಡಿದ್ದ ಭರವಸೆ ಗಳನ್ನು ಈಡೇರಿಸುತ್ತಿಲ್ಲ ಎಂಬ ಅಸಮಾಧಾನ ಅನರ್ಹ ಶಾಸಕರನ್ನು ಕಾಡುತ್ತಿದ್ದು, ಉಪ ಚುನಾವಣೆ ಎದುರಾದರೆ ಬಿಜೆಪಿಯಿಂದ ದೊರೆಯಬಹುದಾದ ಸಹಕಾರ ಮತ್ತು ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯುವ ಕುರಿತಂತೆ ಚರ್ಚಿಸಿದ್ದಾರೆ. ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್‌, ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಕುರಿತು ಚರ್ಚೆ ಮಾಡಿದ್ದೇವೆ. ಶಾಸಕ ಸ್ಥಾನ ಹೋದ ಮಾತ್ರಕ್ಕೆ ನಮ್ಮ ಜೀವನ ಮುಗಿದು ಹೋಗಿಲ್ಲ. ನಾವು ಮುಖ್ಯಮಂತ್ರಿ ಭೇಟಿ ಮಾಡುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಕ್ಷೇತ್ರದ ಕೆಲಸಗಳ ಕುರಿತು ಚರ್ಚಿಸುತ್ತೇವೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ಇದೇ ವೇಳೆ, ಜೆಡಿಎಸ್‌ನಿಂದ ಇನ್ನಷ್ಟು ಶಾಸಕರು ಬಿಜೆಪಿಗೆ ಸೇರುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ನಿಂದ ಬಿಜೆಪಿಗೆ ಸೇರುವುದು ಅವರಿಗೆ ಬಿಟ್ಟ ವಿಚಾರ. ಜೆಡಿಎಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ನಾವು ಆತಂಕಗೊಂ ಡಿಲ್ಲ ಎಂದು ಹೇಳಿದರು. ಸಭೆಯಲ್ಲಿ ಪ್ರತಾಪ್‌ಗೌಡ ಪಾಟೀಲ್‌, ರೋಷನ್‌ ಬೇಗ್‌, ಮುನಿರತ್ನ, ಡಾ.ಸುಧಾಕರ್‌ ಪಾಲ್ಗೊಂಡಿದ್ದರು.

Advertisement

ಸಿಎಂ ಸ್ಪಂದನೆ: ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್‌, ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಪ್ರಕರಣ ಇತ್ಯರ್ಥ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಕುರಿತು ಆತಂಕ ವ್ಯಕ್ತಪಡಿಸಿದರು. ಜತೆಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೆ ಮಾಡಿದ ಮನವಿಗೆ ಯಡಿಯೂರಪ್ಪ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಎದೆಯಲ್ಲಿ ಸಿದ್ದರಾಮಯ್ಯ ಇಲ್ಲ: “ನನ್ನ ಎದೆಯಲ್ಲಿ ಈಗ ಸಿದ್ದರಾಮಯ್ಯ ಇಲ್ಲ. ಅವರನ್ನು ಪಕ್ಕಕ್ಕೆ ಇಟ್ಟಿದ್ದೇನೆ. ನನ್ನ ಎದೆಯಲ್ಲಿ ಕ್ಷೇತ್ರದ ಮತದಾರರಿದ್ದಾರೆ’ ಎಂದು ಹೊಸಕೋಟೆ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್‌ ಹೇಳಿದ್ದಾರೆ. ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ” ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ನಮ್ಮನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಕೆ.ಎಚ್‌. ಮುನಿಯಪ್ಪ ಹೈ ಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ. ರಮೇಶ್‌ ಕುಮಾರ್‌ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಬೇಕು. ಕಾಂಗ್ರೆಸ್‌ನ ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಈಗ ಏನು ಮಾಡುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next