ವಿಧಾನಸಭೆ: ಶಾಸಕಾಂಗ ಪಕ್ಷದ ನಾಯಕನಿಗೆ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡುವ ಅಧಿಕಾರವಿದೆ ಎಂದು ಸ್ಪೀಕರ್ ರಮೇಶ್‌ಕುಮಾರ್ ರೂಲಿಂಗ್ ನೀಡಿದ್ದಾರೆ. ಇದರಿಂದಾಗಿ ಅತೃಪ್ತ ಶಾಸಕರ ಮೇಲೆ ಅನರ್ಹತೆ ತೂಗುಕತ್ತಿ ನೇತಾಡುವಂತಾಗಿದೆ.
ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧ ಸುಪ್ರೀಂಕೋರ್ಟ್, ಶಾಸಕರಿಗೆ ಸದನಕ್ಕೆ ಬರುವಂತೆ ಒತ್ತಡ ಹೇರುವಂತಿಲ್ಲ ಎಂದು ಹೇಳಿ ವಿಪ್ ಬಗ್ಗೆ ಏನೂ ಪ್ರಸ್ತಾಪಿಸದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾಲೋಪಕ್ಕೆ ರೂಲಿಂಗ್ ನೀಡಿದ ಸ್ಪೀಕರ್ ಅವರು, ಸಂವಿಧಾನದ 10 ನೇ ಷೆಡ್ನೂಲ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕನಿಗೆ ವಿಪ್ ನೀಡುವ ಅಧಿಕಾರ ಇದೆ ಎಂದು ಹೇಳಿದರು.
ವಿಪ್ ನೀಡುವುದು ಬಿಡುವುದು ನಿಮಗೆ ಸೇರಿದ್ದು, ಅದನ್ನು ಪಾಲಿಸುವುದು ಬಿಡುವುದು ಆಯಾ ಸದಸ್ಯರಿಗೆ ಸಂಬಂಧಿಸಿದ್ದು. ಆದರೆ, ಅದರಲ್ಲಿ ಉಲ್ಲಂಘನೆಯಾದರೆ ಶಾಸಕಾಂಗ ಪಕ್ಷದ ನಾಯಕರು ದೂರು ಕೊಟ್ಟರೆ ಆ ಬಗ್ಗೆ ಕ್ರಮ ಕೈಗೊಳ್ಳುವುದು ನನ್ನ ಜವಾಬ್ದಾರಿ. ಅದನ್ನು ನಾನು ಕಾನೂನು ಪ್ರಕಾರ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಅವರು ವಿಪ್ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನೂ ಹೇಳಿಲ್ಲ. ಹೀಗಾಗಿ, ಸಂವಿಧಾನದ 10 ನೇ ಷೆಡ್ನೂಲ್ ಪ್ರಕಾರ ನನ್ನ ಹಕ್ಕು ಮೊಟಕುಗೊಳಿಸಲಾಗಿದೆ ಎಂದು ಕ್ರಿಯಾಲೋಪ ಎತ್ತಿದ್ದರು. ನಾನು ಅಡ್ವೋಕೇಟ್ ಜನರಲ್ ಆವರ ಬಳಿಯೂ ಚರ್ಚಿಸಿ ನಂತರ ರೂಲಿಂಗ್ ನೀಡುತ್ತಿದ್ದೇನೆ. ವಿಪ್ ನೀಡಲು ಶಾಸಕಾಂಗ ಪಕ್ಷದ ಅಧ್ಯಕ್ಷರಿಗೆ ಅವಕಾಸ ಇದೆ ಎಂದು ಹೇಳಿದರು.
ಎಚ್.ಕೆ.ಪಾಟೀಲ್ ಮಧ್ಯಪ್ರವೇಶಿಸಿ, ಸುಪ್ರೀಂಕೋರ್ಟ್‌ನಲ್ಲಿ ಶಾಸಕರ ಮೇಲೆ ಯಾರೂ ಒತ್ತಡ ಹೇರಬಾರದು ಎಂದು ಸಹ ತಿಳಿಸಲಾಗಿದೆ. ಇದು ಸ್ಪೀಕರ್ ಅವರ ಅಧಿಕಾರ ಕಸಿದುಕೊಂಡಂತೆ ಎಂದು ತಿಳಿಸಿದರು. ಆಗ ರಮೇಶ್‌ಕುಮಾರ್ ಅವರು, ಹಾಗೆ ನಾವು ಸುಪ್ರೀಂಕೋರ್ಟ್ ಆದೇಶವನ್ನು ಭಾವಿಸುವಂತಿಲ್ಲ. ಸಭಾಧ್ಯಕ್ಷರ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹೀಗಾಗಿ, ನಾವು ಆ ರೀತಿ ತಿಳಿದುಕೊಳ್ಳುವುದು ಬೇಡ ಎಂದು ಹೇಳಿದರು.
ಕ್ರಮ ಕೈಗೊಳ್ಳಲು ಅವಕಾಶ: ಶಾಸಕಾಂಗ ಪಕ್ಷದ ನಾಯಕರು ಶಾಸಕರಿಗೆ ವಿಪ್ ಕೊಡುವ ಅಧಿಕಾರ ಇದೆ ಎಂದು ಸ್ಪೀಕರ್ ರೂಲಿಂಗ್ ನೀಡಿರುವುದರಿಂದ ಈಗಾಗಲೇ ಮುಂಬೈನಲ್ಲಿರುವ ಶಾಸಕರಿಗೆ ನೀಡಿರುವ ವಿಪ್‌ಗೆ ಮಾನ್ಯತೆ ದೊರೆತಂತಾಗಿದೆ. ಆ ಶಾಸಕರು ವಿಪ್ ಉಲ್ಲಂ ಸಿದರೆ ಅಥವಾ ಅವರ ವಿರುದ್ಧ ಅನರ್ಹತೆ ಕ್ರಮ ಕೈಗೊಳ್ಳುವಂತೆ ದೂರು ನೀಡಲು ಅವಕಾಶ ಸಿಕ್ಕಿದಂತಾಗಿದೆ.