Advertisement

ಅನಧಿಕೃತ ಕಲ್ಲು ಗಣಿಗಾರಿಕೆ ತಡೆಯದಿದ್ದರೆ ಹೋರಾಟ

07:36 AM Feb 26, 2019 | Team Udayavani |

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಪೊಲೀಸ್‌ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಆರೋಪಿಸಿದರು. 

Advertisement

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಕಳೆದ 2 ತಿಂಗಳಿನಿಂದಲೂ ಅಕ್ರಮ, ಅನಧಿಕೃತ ಗಣಿಗಾರಿಕೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸಿ ತಾಲೂಕು ಆಡಳಿತ ಅಕ್ರಮ ಗಣಿಗಾರಿಕೆ ವಿರುದ್ಧ ಕೆಲ ಗಣಿಗಾರಿಕೆಗೆ ಬೀಗಮುದ್ರೆ ಹಾಕಿತ್ತು.

ಆದರೆ ಕೆಲ ಗಣಿ ಮಾಲೀಕರು ದೌರ್ಜನ್ಯದಿಂದ ತಾವೇ ಬೀಗ ತೆಗೆದು ಮತ್ತೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಹೀಗಿದ್ದರೂ ಪೊಲೀಸ್‌ ಅಧಿಕಾರಿಗಳು ತಾಲೂಕಿನಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ವರದಿ ನೀಡಿ ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು. 

ತಾಲೂಕು ಆಡಳಿತ ನಿರ್ಲಕ್ಷ್ಯ: ತಾಲೂಕಿನ ಮುಂಡುಗದೊರೆ, ಹಂಗರಹಳ್ಳಿ, ನೀಲನಕೊಪ್ಪಲು, ಕಾಳೇನಹಳ್ಳಿ, ಚನ್ನನಕೆರೆ, ಗೌಡಹಳ್ಳಿ, ಗಣಂಗೂರು, ಸಿದ್ದಾಪುರ ವ್ಯಾಪ್ತಿಯ ಅರಣ್ಯಕ್ಕೆ ಸೇರಿದ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಗೋಮಾಳದಲ್ಲಿ ಟಿ.ಎಂ.ಹೊಸೂರು ಭಾಗದ ವೀಸಿ ಸಂಪರ್ಕ ನಾಲೆಯ ಸುರಂಗ ಮಾರ್ಗದ ಆಸುಪಾಸಿನಲ್ಲಿ ಅರಣ್ಯಕ್ಕೆ ಸೇರಿದ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.

2 ತಿಂಗಳ ಹಿಂದೆ ಈ ಭಾಗದ ರೈತರು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಲಿಖೀತ ಮನವಿ ಸಲ್ಲಿಸಿತ್ತು. ಆದರೆ, ಅಕ್ರಮ ಗಣಿಗಾರಿಕೆಗೆ ಪರೋಕ್ಷವಾಗಿ ಸಹರಿಸುತ್ತಿವೆ ಎಂದು ಕೆಲವು ಇಲಾಖೆಗಳು ನೀಡಿರುವ ದಾಖಲೆಗಳನ್ನು ಬಿಡುಗಡೆಗೊಳಿಸಿ ದೂರಿದರು.

Advertisement

ಬೆಳೆ ನಾಶ: ತಾಲೂಕಾದ್ಯಂತ 60ಕ್ಕೂ ಹೆಚ್ಚು ಜಲ್ಲಿಕ್ರಷರ್‌ಗಳು  ಅನಧಿಕೃತ ವಾಗಿ ನಡೆಯುತ್ತಿದೆ. ಇದರಲ್ಲಿ ಕೇವಲ 6 ಕ್ರಷರ್‌ಗಳು ಮಾತ್ರ ಸಿ-ಫಾರಂ ಪಡೆದಿವೆ. ಅಕ್ರಮ ಗಣಿಗಾರಿಕೆಯಿಂದ ಬಾರಿ ಸ್ಫೋಟಕದಂತ ಬಾರಿ ಶಬ್ಧದಿಂದ ಇಲ್ಲಿ ಹಾದು ಹೋಗುವ ಸಂಪರ್ಕ ನಾಲೆ ಸುರಂಗಕ್ಕೆ ಹಾನಿಯಾಗುತ್ತಿದೆ. ಮುಂದೊಂದು ದಿನ ಕುಸಿಯುವ ಅಪಾಯವಿರುತ್ತದೆ ಹಾಗೂ ಧೂಳು ಮತ್ತು ವಿಷಮಿಶ್ರಿತ ಹೊಗೆಯಿಂದ ಬೆಳೆ ನಾಶ, ಗಿಡ, ಮರ, ಪ್ರಾಣಿ, ಪಕ್ಷಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದೂ ಎಚ್ಚರಿಸಿದರು. 

ಗಣಿಗಾರಿಕೆ ನಿಲ್ಲಿಸಿ: ಶೀಘ್ರ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಜಿಲ್ಲಾ ಟಾಸ್ಕ್ ಪೋರ್ಸ್‌ ಸಮಿತಿ ಸಭೆ ಕರೆದು ಅಕ್ರಮ ಗಣಿಗಾರಿಕೆ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಜಿಲ್ಲಾ ಕಚೇರಿ ಎದುರು ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಅಕ್ರಮ ಗಣಿಗಾರಿಕೆ ನಿಲ್ಲುವವರೆಗೂ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ಜಿಲ್ಲಾ ಮುಖಂಡ ಚಂದ್ರಶೇಖರ್‌, ಟಿ.ಎಂ.ಹೊಸೂರು ಸೋಮಶೇಖರ್‌, ರವೀಂದ್ರ, ದಲಿತ ಮುಖಂಡ ಮೋಹನ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next