ಧಾರವಾಡ: ಹು-ಧಾ ಮಹಾನಗರ ಪಾಲಿಕೆಯ ಠೇವಣಿ ಕೊಡುಗೆ ಕಾಮಗಾರಿ ಅಡಿಯಲ್ಲಿ ಸವದತ್ತಿ ಮತ್ತು ಅಮ್ಮಿನಬಾವಿ ಯಂತ್ರಾಗಾರಗಳಲ್ಲಿ ಹೊಸ ಯಂತ್ರೋಪಕರಣಗಳನ್ನು ಅಳವಡಿಸುವುದು ಹಾಗೂ ಅಮ್ಮಿನಬಾವಿಯಲ್ಲಿ 40 ಎಂಎಲ್‌ಡಿ ಜಲಶುದ್ಧೀಕರಣ ಘಟಕ ನಿರ್ಮಿಸುವ ಯೋಜನೆ ಪೂರ್ಣಗೊಂಡಿದ್ದು, ಇಂದು (ಶನಿವಾರ) ಲೋಕಾರ್ಪಣೆಗೊಳ್ಳಲಿದೆ.
2011ನೇ ಸಾಲಿನ ಜನಗಣತಿ ಪ್ರಕಾರ ಅವಳಿನಗರ ಜನಸಂಖ್ಯೆ 9,43,000 ಇದ್ದು, ಪ್ರಸ್ತುತ ಸುಮಾರು 11,00,000 ಜನಸಂಖ್ಯೆಯಿದೆ. ಅವಳಿನಗರಕ್ಕೆ ಮಲಪ್ರಭಾ ಜಲಾಶಯ ಹಾಗೂ ನೀರಸಾಗರ ಜಲಮೂಲಗಳಿಂದ (ಮಲಪ್ರಭಾ ಜಲಾಶಯದಿಂದ 153.80 ದಶಲಕ್ಷ ಲೀಟರ್ ಹಾಗೂ ನೀರಸಾಗರ ಜಲಾಶಯದಿಂದ 40 ದಶಲಕ್ಷ ಲೀಟರ್) ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ.
ನೀರಸಾಗರ ಜಲಾಶಯವು ಮಳೆಯ ಅಭಾವದಿಂದಾಗಿ ಪೂರ್ಣ ಬತ್ತಿ ಹೋಗಿದ್ದರಿಂದ, 2016ರ ಸೆಪ್ಟೆಂಬರ್‌ನಿಂದ ನೀರು ಸರಬರಾಜು ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತದಲ್ಲಿ ಮಲಪ್ರಭಾ ಜಲಾಶಯದಿಂದ ಪ್ರತಿದಿನ ಸರಾಸರಿ 153.80 ದಶಲಕ್ಷ ಲೀಟರ್ ನೀರನ್ನು ಅವಳಿ (ಧಾರವಾಡ ನಗರಕ್ಕೆ 73.80 ದಶಲಕ್ಷ ಲೀಟರ್ ಹಾಗೂ ಹುಬ್ಬಳ್ಳಿ ನಗರಕ್ಕೆ 80 ದಶಲಕ್ಷ ಲೀಟರ್ ಸಗಟು ನೀರು ಸರಬರಾಜು) ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ.
ಧಾರವಾಡ ನಗರದಲ್ಲಿ ಒಟ್ಟು 24 ವಾರ್ಡ್‌ಗಳಿದ್ದು, ಪ್ರಸ್ತುತ ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಿರುವ ವಾರ್ಡ್‌ಗಳನ್ನು (4 ಪೂರ್ಣ ಮತ್ತು 12 ಭಾಗಶಃ ವಾರ್ಡ್‌ಗಳು) ಹೊರತುಪಡಿಸಿ, ಉಳಿದ ವಾರ್ಡ್‌ಗಳಲ್ಲಿ 3ರಿಂದ 4 ದಿನಗಳಿಗೊಮ್ಮೆ ನೀರು ಸರಬರಾಜು ವ್ಯವಸ್ಥೆಯಿದೆ. ಹುಬ್ಬಳ್ಳಿ ನಗರದಲ್ಲಿ ಒಟ್ಟು 43 ವಾರ್ಡ್‌ಗಳಿದ್ದು, ಪ್ರಸ್ತುತ ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಿರುವ ವಾರ್ಡ್‌ಗಳನ್ನು (7 ಪೂರ್ಣ ಮತ್ತು 3 ಭಾಗಶಃ ವಾರ್ಡ್ ಗಳು) ಹೊರತುಪಡಿಸಿ, ಉಳಿದ ವಾರ್ಡ್‌ಗಳಲ್ಲಿ 5 ರಿಂದ 6 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.
ಆದರೆ ಹುಬ್ಬಳ್ಳಿ ನಗರ ನೀರು ಸರಬರಾಜು ವ್ಯವಸ್ಥೆಯು ನೀರಸಾಗರ ಜಲಾಶಯ ಮೂಲವನ್ನು ಅವಲಂಬಿತವಾಗಿದ್ದು, ಹುಬ್ಬಳ್ಳಿ ನಗರಕ್ಕೆ ಸುಮಾರು 40 ದಶಲಕ್ಷ ಲೀಟರ್ ಸಗಟು ನೀರಿನ ಕೊರತೆ ಉಂಟಾಗುತ್ತಿದೆ. ಈ ಕೊರತೆ ನೀಗಿಸಲು ಮಲಪ್ರಭಾ ಜಲಾಶಯ ಮೂಲದ ಸಗಟು ನೀರು ಸರಬರಾಜು ವ್ಯವಸ್ಥೆಯನ್ನು ಹೆಚ್ಚುವರಿಯಾಗಿ 40 ದಶಲಕ್ಷ ಲೀಟರ್ ಸಾಮರ್ಥ್ಯಕ್ಕೆ ಅಭಿವೃದ್ಧಿಗೊಳಿಸಲು 26 ಕೋಟಿಗಳ ಯೋಜನೆಯನ್ನು, ಹು-ಧಾ ಮಹಾನಗರ ಪಾಲಿಕೆ ಠೇವಣಿ ಕಾಮಗಾರಿಯಡಿ ಕೈಗೆತ್ತಿಕೊಳ್ಳಲಾಗಿದೆ.