ಗಂಗಾವತಿ: ಆನೆಗೊಂದಿ ಕಿಷ್ಕಿಂದಾ ಪ್ರದೇಶವೂ ಬೆಟ್ಟಗುಡ್ಡ, ಹಸಿರಿನಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಪ್ರಕೃತಿ ಸೌಂದರ್ಯ ಇದ್ದಲ್ಲಿ ಇದನ್ನು ಸೆರೆ ಹಿಡಿದು ಜನರಿಗೆ ತಲುಪಿಸಲು ಖ್ಯಾತ ಫೋಟೋಗ್ರಾಫರ್ ಗಳು ಹಗಲು-ರಾತ್ರಿ ಕಿಷ್ಕಿಂದಾ ಪ್ರದೇಶ ತುಂಗಭದ್ರಾ ನದಿ ತೀರದಲ್ಲಿದ್ದು ಅದ್ಭುತ ಫೋಟೋಗಳನ್ನು ಸೆರೆ ಹಿಡಿಯುತ್ತಾರೆ. ಇಂತಹ ಅದ್ಭುತ ಫೋಟೋಗಳ ಪ್ರದರ್ಶನಕ್ಕೆ ಆನೆಗೊಂದಿ ಉತ್ಸವದಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ನಾಡಿನ ಖ್ಯಾತ 18 ಫೋಟೋಗ್ರಾಫರ್ ಗಳು ಹಂಪಿ, ಆನೆಗೊಂದಿ, ಕಿಷ್ಕಿಂದಾ, ಅಂಜನಾದ್ರಿ, ಪಂಪಾಸರೋವರ, ತುಂಗಭದ್ರಾ ನದಿ ಸೇರಿ ಈ ಭಾಗದ ವಿವಿಧ ಬಗೆಯ ಅಪರೂಪದ ಫೋಟೋಗಳ ಪ್ರದರ್ಶನ ಮಾಡಲಿದ್ದಾರೆ.
ವಿಶ್ವವಿಖ್ಯಾತ ಕಿಷ್ಕಿಂದಾ ಅಂಜನಾದ್ರಿಬೆಟ್ಟ ಹೆಚ್ಚು ಫೋಟೋಗ್ರಾಫರ್‌ಗಳನ್ನು ಆಕರ್ಷಿಸಿದ್ದು, ಬಹುತೇಕರು ಅಂಜನಾದ್ರಿಬೆಟ್ಟ, ವಿಜಯವಿಠuಲ ದೇಗುಲದಿಂದ ಅಂಜನಾದ್ರಿ, ಅಂಜನಾದ್ರಿಬೆಟ್ಟದಿಂದ ಹಂಪಿ, ವಿಜಯವಿಠuಲ ದೇಗುಲ, ತುಂಗಭದ್ರಾ ನದಿ, ಸೂರ್ಯೋದಯ-ಸೂರ್ಯಾಸ್ತವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಪ್ರಕೃತಿಯ ಸೌಂದರ್ಯವನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡಿದ್ದಾರೆ. ವಾಲೀಕಿಲ್ಲಾ ಬೆಟ್ಟದಿಂದ ಪಂಪಾಸರೋವರದ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ರಮಣೀಯವಾಗಿ ಫೋಟೋದಲ್ಲಿ ಸೆರೆ ಹಿಡಿಯಲಾಗಿದೆ. ಹಂಪಿ ವಿರೂಪಾಕ್ಷ ದೇಗುಲದ ಎಡಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಭಕ್ತರು ಹಾಗೂ ದೇಗುಲದ ಆನೆ ಸ್ನಾನ ಮಾಡುವ ಫೋಟೋ ಆತ್ಯಾಕರ್ಷಕವಾಗಿದೆ.
ವಿಜಯನಗರದ ಸಂಗಮ ವಂಶದ ಅರಸರು ತುಂಗಭದ್ರಾ ನದಿಗೆ ಅಡ್ಡವಾಗಿ ಆಣೆಕಟ್ಟು ನಿರ್ಮಿಸಿರುವ ಕಾರಣಕ್ಕಾಗಿ ಆನೆಗೊಂದಿ ಭಾಗದ ರೈತರು ವರ್ಷದ 12 ತಿಂಗಳು ತೋಟಗಾರಿಕೆ ಬೆಳೆಗಳನ್ನು ಶತಮಾನಗಳಿಂದ ಬೆಳೆಯುತ್ತಾರೆ. ಈ ಪ್ರದೇಶ ಯಾವಾಗಲೂ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿರುವ ಗುಡ್ಡಪ್ರದೇಶ ಯಾವಾಗಲೂ ಹಸಿರಿನಿಂದ ಕೂಡಿದ್ದು ಪ್ರಕೃತಿ ಮಾತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಾಳೆ. ಇದಕ್ಕೆ ಪೂರಕ ಎನ್ನುವಂತೆ ಹವ್ಯಾಸಿ ಫೋಟೋಗ್ರಾಫರ್‌ಗಳು ಇಲ್ಲಿಯ ಪ್ರಕೃತಿ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಇನ್ನಷ್ಟು ಪ್ರವಾಸಿಗರು ಆಗಮಿಸಲು ಕಾರಣರಾಗಿದ್ದಾರೆ. ಇದೇ ಮೊದಲ ಬಾರಿಗೆ ಛಾಯಚಿತ್ರ ಪ್ರದರ್ಶನ ಏರ್ಪಡಿಸಿರುವುದು ಹವ್ಯಾಸಿ ಕಲಾವಿದರಿಗೆ ತ್ಸಾಹ ನೀಡಿದಂತಾಗಿದೆ.
-ಕೆ. ನಿಂಗಜ್ಜ