Advertisement

ನಗರಸಭೆ ಆಯುಕ್ತರ ಮುಂದೆ ಸಮಸ್ಯೆಗಳ ಅನಾವರಣ

09:04 PM Dec 07, 2019 | Lakshmi GovindaRaj |

ಹಾಸನ: ನಗರಸಭೆಯ 2020-21ನೇ ಸಾಲಿನ ಆಯವ್ಯಯ ರೂಪಿಸಲು ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮೊದಲ ಸುತ್ತಿನ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ನಾಗರಿಕರು ನಗರದ ಸಮಸ್ಯೆಗಳನ್ನು ಅನಾವರಣಗೊಳಿಸಿದರು.

Advertisement

ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 1ನೇ ವಾರ್ಡ್‌ನಲ್ಲಿ ಒಳ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ನಗರಸಭೆ ಸಿಬ್ಬಂದಿ ಮೂಕ ಪ್ರೇಕ್ಷಕರಂತೆ ತಿರುಗುತ್ತಾರೆ. ಮಾಹಿತಿ ನೀಡಿದರೂ ಸ್ಪಂದಿಸುವುದಿಲ್ಲ. ವಿದ್ಯುತ್‌ ದೀಪಗಳಂತೂ ಹಗಲು ರಾತ್ರಿ ಉರಿಯುತ್ತಲೇ ಇರುತ್ತವೆ. ರಸ್ತೆ ಬದಿಯಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುವ ಚಾಳಿಯನ್ನು ಬಿಡಿಸಿ ಎಂದು ಸಮಾಜ ಸೇವಕ ರಾಜೀವೇಗೌಡ ಅವರು ಗಮನ ಸೆಳೆದರು.

ಆಯುಕ್ತರ ಭರವಸೆ: ಈ ದೂರಿಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅವರು ಬೀದಿ ದೀಪ ನಿರ್ವಹಣೆ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದವರು ನಿರ್ವಹಣೆ ಮಾಡುತ್ತಾರೆ. ಹಬ್ಬ-ಹರಿದಿನಗಳಲ್ಲಿ ವ್ಯಾಪಾರ ಮಾಡುವ ಬಗ್ಗೆ ವ್ಯಾಪಾರಿಗಳು ಕೆಲವು ಸಲಹೆ ನೀಡಿದ್ದಾರೆ. ಬೀದಿ ಬದಿ ವ್ಯಾಪಾರಸ್ಥರ ಕಾಯಿದೆ ಜಾರಿಗೆ ಬಂದಿದ್ದು, ಎಲ್ಲಿ ಟ್ರಾಫಿಕ್‌ ಸಮಸ್ಯೆ ಇದೆ ಎಂಬುದನ್ನು ನೋಡಿ ವ್ಯಾಪಾರಿಗಳಿಗೆ ಸೂಕ್ತ ಜಾಗ ಕಲ್ಪಿಸಲಾಗುವುದು ಎಂದರು.

ಸ್ಕೈವಾಕ್‌ ನಿರ್ಮಿಸಿ: ನಗರದ ಎನ್‌.ಆರ್‌. ವೃತ್ತದಲ್ಲಿ ಪಾದಚಾರಿಗಳು ರಸ್ತೆ ದಾಟುವುದೇ ಕಷ್ಟ. ಸ್ಕೈವಾಕ್‌ ನಿರ್ಮಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು. ಕಸ್ತೂರ ಬಾ ರಸ್ತೆಯಲ್ಲಿ ಹೂವನ್ನು ಮಾರಾಟ ಮಾಡುವವರಿಗೆ ಶಾಶ್ವತ ಜಾಗ ಕಲ್ಪಿಸಿಕೊಡಬೇಕು. ನೀರುಗಂಟಿಗಳಿಗೆ ರಾತ್ರಿ ಸಮಯದಲ್ಲಿ ನೀರು ಹರಿಸಲು ಟಾರ್ಚ್‌ ಕೊಡುವ ವ್ಯವಸ್ಥೆ ಮಾಡಿ ಎಂದು ಮನೋಹರ್‌ ಎಂಬವರು ನಗರಸಭೆ ಆಯುಕ್ತರ ಗಮನಸೆಳೆದರು.

ನಗರಸಭೆ ಎರಡನೇ ವಾರ್ಡ್‌ ಸದಸ್ಯ ಮಂಜುನಾಥ್‌ ಮಾತನಾಡಿ, ನಿನ್ನೆ ಅಂಬೇಡ್ಕರ್‌ ಪುಣ್ಯ ತಿಥಿ ಕಾರ್ಯಕ್ರಮ ನಡೆದಿದೆ. ನಗರಸಭೆಯಲ್ಲಿರುವ ಅಂಬೇಡ್ಕರ್‌ ಭಾವಚಿತ್ರಕ್ಕೆ ಒಂದು ಹಾರ ಹಾಕುವ ಸೌಜನ್ಯವನ್ನೂ ನಗರಸಭೆ ಸಿಬ್ಬಂದಿ ತೋರಿಲ್ಲ ಎಂದು ವಿಷಾದಿಸಿದರು.

Advertisement

ಎಸ್ಸಿ,ಎಸ್ಟಿ ಅನುದಾನ ನೀಡಿ: ಪರಿಶಿಷ್ಟ ಜಾತಿ, ಪಂಗಡದವರಿಗೆ ನಿಗದಿಯಾಗಿರುವ ಅನುದಾನವನ್ನು ನಗರಸಭೆ ಎಲ್ಲಾ 35 ವಾರ್ಡುಗಳಿಗೂ ಸಮಾನವಾಗಿ ಹಂಚಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತರು, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣ ಕಾರ್ಯಕ್ರಮಕ್ಕೆ ಕಳೆದ ವರ್ಷ 1.39 ಕೋಟಿ ರೂ. ಇಲ್ಲಿವರೆಗೂ 40 ಲಕ್ಷ ರೂ.ಖರ್ಚಾಗಿದೆ. ಮತ್ತೆ 42 ಲಕ್ಷ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಕೊಡಲಾಗುತ್ತಿದೆ. ಎಲ್ಲಾ ಕಾಮಗಾರಿಗಳು ನಡೆಯುತ್ತಿದೆ ಎಂದು ವಿವರ ನೀಡಿದರು.

ಬಜೆಟ್‌ ಪಾರದರ್ಶಕವಾಗಿರಲಿ: 2020-21ನೇ ಸಾಲಿನ ನಗರಸಭೆ ಬಜೆಟ್‌ ಪಾರದರ್ಶಕವಾಗಿರಲಿ, ಮೌಲ್ಯಾಧರಿತವಾಗಿರಲಿ. ಹಾಸನ ನಗರ ಬೆಳೆಯುತ್ತಿದೆ. ಮಹಾನಗರ ಪಾಲಿಕೆಯಾಗುವ ಅರ್ಹತೆ ಪಡೆದಿದೆ. ನಗರದ 35 ವಾರ್ಡ್‌ಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಬಿ.ಎಂ. ರಸ್ತೆ ಉದ್ದಕ್ಕೂ ಮದ್ಯದ ಅಂಗಡಿಗಳಿವೆ. ಸಂಜೆ ವೇಳೆ ತಿರುಗಾಡುವುದೇ ಕಷ್ಟವಾಗಿದೆ.

ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿ ಮಕ್ಕಳನ್ನು ಕಚ್ಚುತ್ತಿವೆ. ಕೆಲವು ಕಡೆ ಹಂದಿ ಕಾಟದಿಂದ ದಿನನಿತ್ಯ ಹೆದರುತ್ತಾ ತಿರುಗಾಡಬೇಕಾಗಿದೆ ಎಂದು ಸ್ವಾತಂತ್ರ ಹೋರಾಟಗಾರ ಎಚ್‌.ಎಂ. ಶಿವಣ್ಣ ಆತಂಕ ವ್ಯಕ್ತಪಡಿಸಿದರು. ಹೀಗೆ ಹಲವು ಸಮಸ್ಯೆಗಳನ್ನು ಸಭೆಯಲ್ಲಿ ನಾಗರಿಕರು ನಗರಸಭೆ ಆಯುಕ್ತರ ಮುಂದಿಟ್ಟು ಬಜೆಟ್‌ ರೂಪಿಸುವಾಗ ನಮ್ಮ ಸಲಹೆಗಳನ್ನು ಪರಿಗಣಿಸಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next