Advertisement

ಅಭಿವೃದ್ಧಿ ಕಾರ್ಯಗಳ ಅನಾವರಣ

01:05 PM Dec 17, 2019 | Suhan S |

ವಿಜಯಪುರ: ರಾಜ್ಯ ಸರ್ಕಾರ ಅಭಿವೃದ್ಧಿ ಹಿತದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ನೆರೆ ಸಂತ್ರಸ್ತರಿಗೆ ಅನೇಕ ಪರಿಹಾರ ಹಾಗೂ ಜನಪರ ಕಾರ್ಯಕ್ರಮ ಜಾರಿಗೊಳಿಸಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಜಿಪಂ ಸಿಇಒ ಗೋವಿಂದರಡ್ಡಿ ಮನವಿ ಮಾಡಿದರು.

Advertisement

ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಡಿ. 18ರವರೆಗೆ ನಡೆಯಲಿರುವ ರಾಜ್ಯ ಸರ್ಕಾರದ ಸಾಧನೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲ ಸಾರ್ವಜನಿಕರು ಮತ್ತುವಿದ್ಯಾರ್ಥಿಗಳು ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೂ ನೆರವಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವಂತೆ ಸಲಹೆ ನೀಡಿದರು. ರಾಜ್ಯದಲ್ಲಿ ಇತ್ತೀಚೆಗೆ ಬಂದಿದ್ದ ನೆರೆ ಹಾವಳಿ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಹಲವು ಕ್ರಮಗಳು ಸೇರಿದಂತೆ ಸಾಧನೆಗಳ ಅನಾವರಣಗೊಳಿಸುವ ಛಾಯಾಚಿತ್ರ ಪ್ರದರ್ಶನ ಡಿ. 18ರವರೆಗೆ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಆಯೋಜಿಸಲಾಗಿದೆ. ಎಲ್‌ಇಡಿ ಮೂಲಕ ರಾಜ್ಯ ಸರ್ಕಾರ ನೆರೆ ಹಾವಳಿ ಸಂದರ್ಭದಲ್ಲಿ ಕೈಗೊಂಡ ಹಲವು ಮುನ್ನೆಚ್ಚರಿಕಾ ಕ್ರಮಗಳು,ನೆರೆ ಹಾವಳಿ ಸಂತ್ರಸ್ತರಿಗೆ ಘೋಷಿಸಿದ ಪರಿಹಾರ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಮಾಹಿತಿ ಒದಗಿಸುವ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದ ಸರ್ಕಾರ, ಐಟಿ-ಬಿಟಿ ಅಭಿವೃದ್ಧಿ ಆವಿಷ್ಕಾರ ಪ್ರಾಧಿಕಾರ, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ಯೋಜನೆಯಡಿ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯದ ಕೊಡುಗೆ, ನೇಕಾರರ ಸಾಲ ಮನ್ನಾ, ಮೀನುಗಾರರ ಸಾಲ ಮನ್ನಾ, ಕೈಗಾರಿಕೆಗಳ ಉತ್ತೇಜನ, ಪ್ರವಾಸೋದ್ಯಮಕ್ಕೆ ಉತ್ತೇಜನ, ಕಲ್ಯಾಣ ಕರ್ನಾಟಕ ಪರ್ವಕ್ಕೆ ಚಾಲನೆ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ ಎಂದು ವಿವರ ನೀಡಿದರು. ಪಪೂ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್‌. ಪೂಜೇರಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ| ಸಂಪತ್‌ ಗುಣಾರಿ, ಕೆಎಸ್‌ಆರ್‌ಟಿಸಿ ಡಿಟಿಒ ಬಿರಾದಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next