Advertisement

Sagara ಕುಟುಂಬ ವ್ಯವಸ್ಥೆಯಿಂದ ಸುಸಂಸ್ಕೃತಿಯ ಅನಾವರಣ; ಕಾಗೇರಿ ಅಭಿಮತ

06:01 PM Feb 06, 2024 | Shreeram Nayak |

ಸಾಗರ: ಓರ್ವ ವ್ಯಕ್ತಿ ಹಾಗೂ ಆತನ ಸುತ್ತಲಿನ ಕುಟುಂಬ ವ್ಯವಸ್ಥೆಯ ಏಕತ್ರ ಭಾವ ವಿಶಿಷ್ಟವಾದ ಸುಸಂಸ್ಕೃತಿಯ ಭಾಗವಾಗಿ ನಮಗೆ ಮಾದರಿಯಾಗುತ್ತದೆ. ಆ ರೀತಿ ಬಾಳಿದ ಸಹಕಾರಿ ಧುರೀಣ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಬದುಕು ಹಾಗೂ ಅವರ ಅವಿಭಕ್ತ ಕುಟುಂಬ ಎಲ್ಲರಿಗೂ ಉತ್ತಮ ಪಂಕ್ತಿ ಹಾಕಿಕೊಡುತ್ತಿದೆ ಎಂದು ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಮಡಸೂರು ಲಿಂಗದಹಳ್ಳಿಯ ಸಾವಿತ್ರಮ್ಮ ಮತ್ತು ಎಲ್‌ಟಿ. ತಿಮ್ಮಪ್ಪ ಹೆಗಡೆ ಪ್ರತಿಷ್ಠಾನದಿಂದ ಕಾನುಕೊಪ್ಪದಲ್ಲಿ ಸೋಮವಾರ ಏರ್ಪಡಿಸಿದ್ದ ಎಲ್.ಟಿ ತಿಮ್ಮಪ್ಪ ಹೆಗಡೆ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆಗೆ ಗೌರವ ತಂದುಕೊಟ್ಟ ಅಪರೂಪದ ರಾಜಕಾರಣಿಗಳಲ್ಲಿ ಎಲ್.ಟಿ. ತಿಮ್ಮಪ್ಪನವರು ಎದ್ದು ಕಾಣುತ್ತಾರೆ. ಪ್ರಸ್ತುತ ಅವರು ಕುಟುಂಬವನ್ನು ಗಮನಿಸಿದಾಗ ನಂಬಿಕೆ, ಪ್ರಾಮಾಣಿಕತೆ, ಭಾವನಾತ್ಮಕ ಸಂಬಂಧಗಳನ್ನು ಕಾಣಬಹುದು. ಇಂತಹ ಮಾನವೀಯ ಮತ್ತು ಭಾವನಾತ್ಮಕ ಸಂಬಂಧಗಳು ಇಂದಿನ ಒಟ್ಟು ವ್ಯವಸ್ಥೆ ಅತ್ಯಂತ ಅಗತ್ಯವಿದೆ ಎಂದರು.

ಹೊರ ಜಗತ್ತಿನಲ್ಲಿ ವ್ಯವಹಾರಿಕ ಸಂಬಂಧಗಳು ಹೆಚ್ಚುತ್ತಿರುವುದು ಆತಂಕ. ಇದರ ಪರಿಣಾಮವಾಗಿ ವೃದ್ದಾಶ್ರಮ, ಅನಾಥಾಶ್ರಮ ಹೆಚ್ಚಬಹುದು. ಅದನ್ನು ತಪ್ಪಿಸುವುದಕ್ಕೆ ಇಂತಹ ಸುಸಂಸ್ಕೃತ ಕುಟುಂಬದ ಆದರ್ಶಗಳತ್ತ ನಾವು ಲಕ್ಷ್ಯ ವಹಿಸಬೇಕಿದೆ.

ಎಲ್.ಟಿ.ಹೆಗಡೆಯವರ ಜೊತೆ ಜೀವನ ನಡೆಸಿದ ಸಾವಿತ್ರಮ್ಮ, ಅಪ್ಪನ ಸಭ್ಯ ಬದುಕಿನ ಹೆಜ್ಜೆಗಳು ಅಳಿಸದಂತೆ ನೋಡಿಕೊಳ್ಳುತ್ತಿರುವ ಮಗ ತಿಮ್ಮಪ್ಪ ಹಾಗೂ ಉಳಿದ ಎಲ್ಲರ ಕೊಡುಗೆಯನ್ನೂ ನಾವು ಸ್ಮರಿಸಬೇಕು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿ, ಹೆಗಡೆಯವರು ಶುದ್ಧ ಆಸ್ತಿಕರು. ಆದರೆ ನಾಸ್ತಿಕರು ಕೂಡ ಗೌರವಿಸುವಂತಹ ವ್ಯಕ್ತಿತ್ವ ಹೊಂದಿದ್ದರು. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ ಅಪರೂಪದ ವ್ಯಕ್ತಿಗಳಲ್ಲಿ ಎಲ್.ಟಿ. ತಿಮ್ಮಪ್ಪ ಹೆಗಡೆ ಒಬ್ಬರು ಎಂದರು.

Advertisement

ಹಿಂದೂ ಧರ್ಮದ ಕುರಿತು ಸಹಮತ ಇಲ್ಲದ ಬೌದ್ಧ, ಜೈನ್ ಧರ್ಮಗಳು ಕೂಡ ತನ್ನದೇ ಆದ ಸಂಸ್ಕಾರ ಹೊಂದಿವೆ, ಚೌಕಟ್ಟನ್ನು ಪಡೆದಿವೆ. ಅಲ್ಲೂ ಜೀವನ ವಿಧಾನ ಇದೆ. ಹಾಗೆಯೇ ಹಿಂದೂ ಧರ್ಮದಲ್ಲೂ ಆಯಾ ಕಾಲಘಟ್ಟಕ್ಕೆ ಬೇಕಾದ ಚೌಕಟ್ಟುಗಳನ್ನು ಅಳವಡಿಸಲಾಗಿದೆ. ಹಾಗೆ ಧರ್ಮದ ಪರಿಧಿಯ ಹೊರಹೋಗದೆ, ಚ್ಯುತಿ ಬರದಂತೆ ನಡೆದುಕೊಂಡ ಮತ್ತು ಅದೇ ವೇಳೆ ಸಮಾಜಕ್ಕೂ ಮಾನ್ಯರಾದ ಎಲ್‌ಟಿ ಅವರ ಬದುಕು ವಿಶಿಷ್ಟವಾದುದು ಎಂದು ಬಣ್ಣಿಸಿದರು.

ಎಲ್.ಟಿ. ತಿಮ್ಮಪ್ಪ ಹೆಗಡೆ ಕುರಿತಂತೆ ವಿಶೇಷ ಉಪನ್ಯಾಸ ನೀಡಿದ ಚಿಂತಕ, ರಂಗಕರ್ಮಿ ದೇವೇಂದ್ರ ಬೆಳೆಯೂರು, ಸಂಶಯದ ಜೀವಿಯಾಗಿ ನಾನು ಹೆಗಡೆಯವರನ್ನು ಅನುಮಾನದಿಂದಲೇ ನೋಡಿದರೂ ಅವರು ಪ್ರತಿ ಸಂದರ್ಭದಲ್ಲಿ ಸ್ಪಷ್ಟ ವ್ಯಕ್ತಿತ್ವವಾಗಿಯೇ ಹೊರಹೊಮ್ಮಿದ್ದಾರೆ. ಬದುಕಿನಲ್ಲಿ ಪ್ರತಿಯೊಬ್ಬನಿಗೂ ಆತ್ಮಗೌರವ ಎನ್ನುವುದು ಸಮಾನವಾದುದು ಎಂಬುದನ್ನು ಅವರ ಪ್ರತಿ ನಡೆನುಡಿಯಲ್ಲಿ ವ್ಯಕ್ತವಾಗುತ್ತಿತ್ತು. ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತ, ಸರಿಪಡಿಸಿಕೊಳ್ಳುತ್ತಲೇ ಅವರ ಸಮಾಜಕ್ಕೆ ಕಳುಹಿಸಿದ ಸಂದೇಶ ಅಪರೂಪವಾದುದು ಎಂದರು.

ಕಾರ್ಯಕ್ರಮದಲ್ಲಿ ಪಾಲೊಂಡಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಎಚ್. ಹಾಲಪ್ಪ ಹರತಾಳು, ಸೂಡಾ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ, ಮಾಜಿ ಶಾಸಕ ಸ್ವಾಮಿರಾವ್ ಮೊದಲಾದವರು ಮಾತನಾಡಿದರು. ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಲ್.ಟಿ. ಅಶೋಕ್ ಇದ್ದರು. ಎಲ್.ಟಿ. ತಿಮ್ಮಪ್ಪ ಸ್ವಾಗತಿಸಿದರು. ಗಣಪತಿ ಹೆಗಡೆ ವಂದಿಸಿದರು. ರಾಜಲಕ್ಷ್ಮಿ ನಿರೂಪಿಸಿದರು. ಇದೇ ವೇಳೆ ವಸುಧಾ ಶರ್ಮ ಹಳೆಇಕ್ಕೇರಿ ಹಾಗೂ ಸಂಗಡಿಗರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next