ಗಂಗಾವತಿ: ಐತಿಹಾಸಿಕ ಆನೆಗೊಂದಿ ಉತ್ಸವದ ಜಾನಪದ ಮೆರವಣಿಗೆ ವಾಲೀಕಿಲ್ಲಾದ ಆದಿಶಕ್ತಿ ದೇಗುಲದಿಂದ ಆರಂಭವಾಯಿತು. ಶಾಸಕ ಪರಣ್ಣ ಮುನವಳ್ಳಿ, ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ ಹೊಸಮನಿ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆ ಚಾಲನೆಗೂ ಮುಂದೆ ಗಣ್ಯರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಮೆರವಣಿಗೆಯಲ್ಲಿ ಡೊಳ್ಳು, ನಂದಿಕೋಲು, ಕರಡಿ ಮಜಲು, ಕೋಲಾಟ, ಲಮಾಣಿ ನೃತ್ಯ, ಜಗ್ಗಲಿವಾದನ, ಮರಕೋಲು ಕುಣಿತ, ಹಗಲು ವೇಷಧಾರಿಗಳ ತಂಡ, ಭಜನೆ, ಡೆಕ್ಕೆ ಕುಣಿತ ತಂಡ ಸೇರಿ ನಾಡಿನ ವಿವಿಧ ಜಾನಪದ ಕಲಾ ತಂಡಗಳು ಸಿದ್ದಾಪುರ ಕಸ್ತೂರಬಾ ಶಾಲೆಯವಿದ್ಯಾರ್ಥಿನಿಯರ ಪಥಸಂಚಲನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಳೆಕಟ್ಟಿದವು. ಆದಿಶಕ್ತಿ ದೇಗುಲದಿಂದ ಹೊರಟ ಮೆರವಣಿಗೆ ಆನೆಗೊಂದಿ ಅಗಸಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಶ್ರೀರಂಗನಾಥ ಸ್ವಾಮಿ ದೇಗುಲದ ಬಳಿ ಕೊನೆಗೊಂಡಿತು. ಮಾರ್ಗ ಮಧ್ಯೆ ಪ್ರವಾಸೋದ್ಯಮ ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ ಮೆರವಣಿಗೆಯಲ್ಲಿ ಪಾಲ್ಗೊಂಡ ಜಾನಪದ ಕಲಾ ತಂಡಗಳ ಸದಸ್ಯರ ಜತೆ ಸೆಲ್ಫಿತೆಗೆಸಿಕೊಳ್ಳುವ ಮೂಲಕ ಪ್ರೋತ್ಸಾಹಿಸಿದರು.
ಪ್ರತಿವರ್ಷ ಆನೆಗೊಂದಿ ಉತ್ಸವ ಆಚರಣೆಗೆ ಸರಕಾರ ಅನುದಾನ ಬಿಡುಗಡೆ ಮಾಡಲಿದೆ. ಆನೆಗೊಂದಿ ಉತ್ಸವದ ಮೂಲಕ ವಿಜಯನಗರದ ವೈಭವವನ್ನು ಮರುಕಳಿಸುವ ಮೂಲಕ ಹಳೆಯ ವೈಭವವನ್ನು ಯುವಜನರಿಗೆ ಪರಿಚಯಿಸುವುದಾಗಿದೆ. ಕಿಷ್ಕಿಂದಾ ಅಂಜನಾದ್ರಿಬೆಟ್ಟಕ್ಕೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂಲಸೌಕರ್ಯ ಸೇರಿ ಹಲವು ಸೌಕರ್ಯ ಕಲ್ಪಿಸಲು ಯೋಜಿಸಲಾಗಿದೆ. ಕೇಂದ್ರ ಸರಕಾರ ಶ್ರೀರಾಮಾಯಣ ಸರ್ಕ್ನೂಟ್ ಯೋಜನೆಯಲ್ಲಿ ಅಂಜನಾದ್ರಿ ಸೇರ್ಪಡೆ ಮಾಡಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಸ್ಪಂದಿಸಲಿದೆ. ಕನಕಗಿರಿ ಉತ್ಸವ ಆಚರಣೆ ಕುರಿತು ಶಾಸಕ ದಡೇಸುಗೂರು ತಮ್ಮ ಜತೆ ಮಾತನಾಡಿದ್ದು, ಈಗಾಗಲೇ 30 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೂ ಬೇಡಿಕೆಯಂತೆ ಅನುದಾನ ಕೊಡಲಾಗುತ್ತದೆ.
– ಸಿ.ಟಿ.ರವಿ, ಪ್ರವಾಸೋದ್ಯಮ ಕನ್ನಡ ಸಂಸ್ಕೃತಿ ಸಚಿವ
-ಕೆ.ನಿಂಗಜ್ಜ