ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ 190 ಸದಸ್ಯರ ದೊಡ್ಡ ತಂಡವನ್ನು ಕಳುಹಿಸಲಾಗುವುದು ಎಂಬುದಾಗಿ ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ. ಇದರಲ್ಲಿ 100 ಕ್ರೀಡಾಪಟುಗಳು ಸೇರಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತೀಯ ಕ್ರೀಡಾಪಟುಗಳ ಕಿಟ್ ಬಿಡುಗಡೆ ಕಾರ್ಯಕ್ರಮದ ವೇಳೆ ಬಾತ್ರಾ ಈ ಮಾಹಿತಿ ನೀಡಿದರು. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕಿಟ್ ಬಿಡುಗಡೆ ಮಾಡಿದರು.
ಇನ್ನಷ್ಟು ಮಂದಿ ಆಯ್ಕೆ :
ಈ ವರೆಗೆ ಸರಿಯಾಗಿ 100 ಕ್ರೀಡಾಪಟುಗಳು ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ. ಇವರಲ್ಲಿ 56 ಪುರುಷರು, 44 ವನಿತೆಯರು ಸೇರಿದ್ದಾರೆ. ಮುಂದಿನ 2-3 ವಾರಗಳಲ್ಲಿ ಇನ್ನೂ ಸುಮಾರು 25ರಿಂದ 35ರಷ್ಟು ಕ್ರೀಡಾಳುಗಳು ಅರ್ಹತೆ ಸಂಪಾದಿಸುವ ನಿರೀಕ್ಷೆ ಇದೆ ಎಂದು ಬಾತ್ರಾ ಹೇಳಿದರು. ಕ್ರೀಡಾ ಸಚಿವಾಲಯದ ನಿಯಮದಂತೆ, ಅರ್ಹತೆ ಪಡೆದ ಕ್ರೀಡಾಪಟುಗಳ ಸಂಖ್ಯೆಯ ಮೂರನೇ ಎರಡಕ್ಕಿಂತ ಹೆಚ್ಚು ಅಧಿಕಾರಿಗಳು ತೆರಳುವಂತಿಲ್ಲ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಗಳ ಸಂಖ್ಯೆ ಎರಡಂಕಿಯ ಗಡಿ ತಲುಪಲಿದೆ ಎಂಬ ವಿಶ್ವಾಸವನ್ನೂ ನರೀಂದರ್ ಬಾತ್ರಾ ವ್ಯಕ್ತಪಡಿಸಿದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕ ಜಯಿಸಿದ್ದು ಭಾರತದ ದಾಖಲೆ ಆಗಿದೆ (2 ಬೆಳ್ಳಿ, 4 ಕಂಚು).
ದೇಶವೇ ಬೆಂಬಲಕ್ಕಿದೆ…
ಈ ಸಂದರ್ಭದಲ್ಲಿ ಮಾತಾಡಿದ ಕಿರಣ್ ರಿಜಿಜು, “ಐಒಎ ಇದೇ ತಿಂಗಳು ಪ್ಲೇಬುಕ್ ನೂತನ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಆರೋಗ್ಯ ಮಾರ್ಗಸೂಚಿಯ ಸಂಪೂರ್ಣ ವಿವರವಿದ್ದು, ಇದನ್ನು ಎಲ್ಲರೂ ಪಾಲಿಸಬೇಕು. ನಮ್ಮ ಆ್ಯತ್ಲೀಟ್‌ಗಳೆಲ್ಲ ಅತ್ಯುತ್ತಮ ಸಾಧನೆ ತೋರ್ಪಡಿಸಲಿ, ಇಡೀ ದೇಶವೇ ಅವರ ಬೆಂಬಲಕ್ಕಿದೆ. ಕ್ರೀಡಾ ಸಚಿವಾಲಯ ಅವರ ಎಲ್ಲ ಅಗತ್ಯಗಳನ್ನು ಪೂರೈಸಲು ಬದ್ಧವಾಗಿದೆ’ ಎಂದರು.