Advertisement

ಉಪಯೋಗವಿಲ್ಲದ ಆರೋಗ್ಯ ಉಪಕೇಂದ್ರ

05:57 PM Dec 16, 2019 | Suhan S |

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅತಿ ಹೆಚ್ಚು ಅಪಘಾತವಾಗುವ ಟಿ.ಬೇಗೂರು ಸಮೀಪದ ಆರೋಗ್ಯ ಉಪ ಕೇಂದ್ರದಲ್ಲಿ ಕನಿಷ್ಠ ಪ್ರಥಮ ಚಿಕಿತ್ಸೆಯನ್ನು ನೀಡುವಷ್ಟು ಸೌಲಭ್ಯಗಳಿಲ್ಲದೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಸಕಾಲದಲಿ ಚಿಕಿತ್ಸೆ ಸಿಗದೇ ಸಂಕಷ್ಟ ಅನುಭವಿಸುಂತಾಗಿದೆ.

Advertisement

ಬೆಂಗಳೂರು ತುಮಕೂರು ಹಾಗೂ ಮಂಗಳೂರು ಹೆದ್ದಾರಿಗಳು ಹಾದುಹೋಗುವ ತಾಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವರ್ಷಕ್ಕೆ ಸುಮಾರು 450ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದರೆ, ಶೇ.30 ಅಪಘಾತಗಳು ತಾಲೂಕಿನ ಹೆದ್ದಾರಿ 4 ರಲ್ಲಿರುವ ಬೊಮ್ಮನಹಳ್ಳಿಯಿಂದ ಕೆರೆಕತ್ತಿಗನೂರು ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ¬. ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುವವರನ್ನು 15 ಕಿ.ಮೀಗೂ ಹೆಚ್ಚು ದೂರದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗ ಬೇಕಾದ ಅನಿವಾರ್ಯತೆ ಎದುರಾಗಿದೆ.

ಉಪಕೇಂದ್ರಕ್ಕೆ ಬೀಗ : ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಿರುವ ಟಿ.ಬೇಗೂರು ಸಮೀಪದ ಹೆದ್ದಾರಿಯಲ್ಲಿ ವಾರಕ್ಕೆ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಆದರೆ 1972ರಿಂದ ಸೇವೆ ಸಲ್ಲಿಸುತಿದ್ದ ಆರೋಗ್ಯ ಉಪಕೇಂದ್ರದಲ್ಲಿ ಗ್ರಾಮದ ಜನರು ಸೇರಿದಂತೆ ಹೆದ್ದಾರಿಯ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಲು ಸಾಧ್ಯವಾಗದ ದುಸ್ತಿತಿಗೆ ಬಂದಿದೆ, ಗುರವಾರ ಒಂದು ದಿನ ಮಾತ್ರ 2 ಗಂಟೆ ನಂತರ ಬಾಗಿಲು ತೆಗೆಯಲು ಒಬ್ಬರು ನರ್ಸ್‌ ನೇಮಿಸಲಾಗಿದ್ದರೂ, ಇನ್ನುಳಿದ 6 ದಿನ ಉಪಕೇಂದ್ರಕ್ಕೆ ಬೀಗವಾಕಿರುತ್ತದೆ. ಆರೋಗ್ಯ ಕೇಂದ್ರದ ಆವರಣ ಸೊಳ್ಳೆ, ಹಾವು ಚೇಳುಗಳ ಆವಾಸ ಸ್ಥಾನವಾಗಿದೆ.

ಆಸ್ಪತ್ರೆಯ ಅನಿವಾರ್ಯ: ತಾಲೂಕಿನ ಹೆದ್ದಾರಿಯಲ್ಲಿ ಅಪಘಾತವಾಗಿ 450ಕ್ಕೂ ಹೆಚ್ಚು ಜನ ಗಾಯಗೊಂಡರೆ, 100ಕ್ಕೂ ಹೆಚ್ಚು ಜನರು ಮೃತರಾಗಿರುವ ದಾಖಲೆ ಇದೆ. ಈ ಅಂಕಿ ಅಂಶದ ಅರ್ಧಭಾಗ ಟಿ.ಬೇಗೂರು ಸಮೀಪದ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಿಲುಕಿದವರೇ ಹೆಚ್ಚು, ಹೆದ್ದಾರಿಯಲ್ಲಿ ಅಪಘಾತವಾದರೆ ದಾಬಸ್‌ಪೇಟೆ ಬಿಟ್ಟರೆ ನೆಲಮಂಗಲದಲ್ಲಿರುವ ಆಸ್ಪತ್ರೆಗಳಿಗೆ ಕರೆ ತರಬೇಕು, ಟಿ.ಬೇಗೂರಿನ ಆರೋಗ್ಯ ಉಪಕೇಂದ್ರ ಆರಂಭವಾಗಿ ಎಲ್ಲಾ ಸೌಲಭ್ಯಗಳಿಂದ ವೈದ್ಯರು ಸೇವೆ ಸಲ್ಲಿಸಿದ ರೆಅನೇಕರ ಪ್ರಾಣ ಉಳಿಸಲು ಸಾಧ್ಯವಾಗಲಿದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.

ಮಾಜಿ ಶಾಸಕರ ಪ್ರಭಾವ ಆರೋಪ : ಟಿ.ಬೇಗೂರಿಗೆ ಅನಿವಾರ್ಯವಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈ ಹಿಂದೆ ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದ ಎಂ.ವಿ ನಾಗರಾಜು ಸ್ವಗ್ರಾಮದಲ್ಲಿ ಆಸ್ಪತ್ರೆ ಮಾಡಿಸಲು ತಮ್ಮ ಪ್ರಭಾವದಿಂದ ಮಾರಗೊಂಡನಹಳ್ಳಿಗೆ ಬದಲಾಯಿಸಿದರು,. ಇದರಿಂದ 17 ಕಿ.ಮೀ ಹೆಚ್ಚು ದೂರದ ಆಸ್ಪತ್ರೆಗೆ ಹೋಗವ ಪರಿಸ್ಥಿತಿ ಎದುರಾಗಿದೆ. ಆರೋಗ್ಯ ಉಪಕೇಂದ್ರದಲ್ಲಿ ಸೌಲಭ್ಯವಿಲ್ಲದಿರುವುದು ದುರಂತ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಇಲ್ಲಿ ವೈದ್ಯರೇ ಶಾಸಕರು : ತಾಲೂಕಿನಲ್ಲಿ ಎರಡನೇ ಭಾರಿ ಅಭೂತಪೂರ್ವ ಗೆಲುವು ಪಡೆದ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆಸಲ್ಲಿಸಿದವರು, ಜನರ ಕಷ್ಟಗಳನ್ನು ತಿಳಿದವರು ಆದರೂ ಆಸ್ಪತ್ರೆಗಳ ಕಾರ್ಯವೈಖರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅನಿವಾರ್ಯವಿರುವ ಬಗ್ಗೆ ತಿಳಿಯದೇ ಸೌಲಭ್ಯ ನೀಡದಿರುವುದು ಬಹಳ ಬೇಸರದ ಸಂಗತಿ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಪಿ.ಹೆಚ್‌.ಸಿಗೆ ಒತ್ತಾಯ : ಟಿ.ಬೇಗೂರು ಆರೋಗ್ಯ ಉಪಕೇಂದ್ರ ಪ್ರಾರಂಭವಾಗಿ 42 ವರ್ಷಗಳು ಕಳೆದಿದೆ, 2008 ರವರೆಗೂ ಈ ಕೇಂದ್ರದಲ್ಲಿ ವರ್ಷಕ್ಕೆ 80ಕ್ಕೂ ಹೆಚ್ಚು ಹೆರಿಗೆ ಮಾಡಿಸಲಾಗುತಿತ್ತು. ಆ ನಂತರ ಸೌಲಭ್ಯದ ಕೊರತೆಯಿಂದ ನಿಲ್ಲಿಸಲಾಗಿದೆ, ಕನಿಷ್ಟ ಪ್ರಥಮ ಚಿಕಿತ್ಸೆಯ ಕೇಂದ್ರವನ್ನಾಗಿ ಮಾಡಿದರೂ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ, ಟಿ.ಬೇಗೂರು ಆರೋಗ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಹಾಗೂ ಹೆದ್ದಾರಿ ವಾಹನ ಸವಾರರಿಗೆ ಅನುಕೂಲವಾಗುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗ್ರಾಮದ ನಿವಾಸಿ ನಂದಕುಮಾರ್‌ ಪ್ರತಿಕ್ರಿಯಿಸಿ ಟಿ.ಬೇಗೂರಿನ ಸಮೀಪ ಬಹಳಷ್ಟು ಅಪಘಾತಗಳಾದಾಗ ಪ್ರಥಮಚಿಕಿತ್ಸೆಗಾಗಿ ನೆಲಮಂಗಲ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು, ಉಪ ಕೇಂದ್ರಕ್ಕೆ ವೈದ್ಯರನ್ನು ನೇಮಿಸಿ ಸೌಲಭ್ಯ ನೀಡಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದರು.

 

-ಕೊಟ್ರೇಶ್‌.ಆರ್‌

Advertisement

Udayavani is now on Telegram. Click here to join our channel and stay updated with the latest news.

Next