ಜಗಳೂರು: ಬರದ ನಿರ್ವಹಣೆಗೆ ತಾಲೂಕಿನ ಗುರುಸಿದ್ದಾಪುರ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ತಾಲೂಕು ಆಡಳಿತ ದಾಸ್ತಾನು ಮಾಡಲಾಗಿರುವ ಮೇವು ಜಾನುವಾರುಗಳಿಗೆ ಬಳಕೆಯಾಗುತ್ತಿಲ್ಲ ಎಂಬ ದೂರು ರೈತರಿಂದ ಕೇಳಿಬರುತ್ತಿದೆ.
ಕಳೆದ 2 ತಿಂಗಳ ಹಿಂದೆ ಸ್ಥಾಪಿಸಲಾಗಿರುವ ಈ ಮೇವಿನ ಕೇಂದ್ರ ಬಿಕೋ ಎನ್ನುತ್ತಿದ್ದು, ಬಿರುಬಿಸಿಲಿನ ಝಳಕ್ಕೆ ಮೇವು ಒಣಗುತ್ತಿರುವುದು ಸಾಮಾನ್ಯವಾಗಿದೆ. ಅವೈಜ್ಞಾನಿಕವಾಗಿ ನೆಲದ ಮೇಲೆ ದಾಸ್ತಾನು ಮಾಡಲಾಗಿರುವ ಮೇವಿನ ಕೆಳಭಾಗದಲ್ಲಿ ಗೆದ್ದಲು ಹೂಳುಗಳು ತಿಂದು ಮುಗಿಸುತ್ತಿದ್ದು, ಅಲ್ಲಲ್ಲಿ ಮೇವು ಚೆಲ್ಲಾಪಿಲ್ಲಿಯಾಗಿದೆ.
ಸುಮಾರು 50 ಟನ್‌ನಷ್ಟು ದಾಸ್ತಾನಾಗಿರುವ ಮೇವಿನ ದಾಸ್ತಾನು ರೈತರ ಮಾರಾಟಕ್ಕೋ ಅಥವಾ ಗೋಶಾಲೆಯ ತೆರೆಯುವ ಉದ್ದೇಶವೋ ಎಂಬುದು ತಾಲೂಕು ಆಡಳಿತವಾಗಲಿ, ಜಿಲ್ಲಾಢಳಿತವಾಗಲಿ ಇನ್ನು ಸ್ಪಷ್ಟವಾಗಿ ಯಾವುದೇ ಆದೇಶ ನೀಡಿಲ್ಲ. ಮೇವು ಕಾಯುವ ಜವಾಬ್ದಾರಿ ನೀಡಿದ್ದಾರೆ. ನಾವು ಕಾಯುತ್ತಿದ್ದೇವೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.
ಜಗಳೂರು ಸೇರಿದಂತೆ ಇತರೇ ಹೊರ ಜಿಲ್ಲೆಯ ತಾಲೂಕಿನ ರೈತರು ಮೇವು ಅರಿಸಿ ಇಲ್ಲಿನ ಸಮೃದ್ಧ ರಂಗಯ್ಯನದುರ್ಗ ಅರಣ್ಯ ಪ್ರದೇಶಕ್ಕೆ ತಮ್ಮ ಜಾನುವಾರುಗಳೊಂದಿಗೆಮಳೆಗಾಲ ಬರುವವರೆಗೂ ಮೊಕ್ಕಂ ಹೂಡುತ್ತಾರೆ. ವಿಶಾಲ ಅರಣ್ಯ ಪ್ರದೇಶದಲ್ಲಿನ ಈ ರಾಸುಗಳಿಗೆ ಮೇವಿಲ್ಲದೇ ಪರದಾಡುತ್ತಿವೆ. ಆದರೆ ಆ ರೈತರಿಗೂ ಕೂಡಾ ಮೇವಿನ ಬಗ್ಗೆ ಮಾಹಿತಿ ಇಲ್ಲವಾಗಿದೆ.
ದಾಸ್ತಾನಾಗಿರುವ ಮೇವು ಜಾನುವಾರುಗಳಿಗೆ ಉಪಯೋಗವಾಗಬೇಕಿದೆ. ಮೇವು ಕೇಳುವ ರೈತರಿಗೆ ಕೂಡಲೇ ವಿತರಿಸಬೇಕೆಂದು ಆಭಾಗದ ರೈತರು ಒತ್ತಾಯಿಸಿದ್ದಾರೆ. ಒಟ್ಟಾರೆ ಅಧಿಧಿಕಾರಿಗಳು ಬರನಿರ್ವಹಣೆಗೆ ಮೇವು ದಾಸ್ತಾನು ಮಾಡಿರುವುದು ಆಟಕ್ಕೂಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದು, ಸಂಬಂಧಪಟ್ಟ ಜಿಲ್ಲಾಢಳಿತ ಇತ್ತ ಗಮನಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.