Advertisement

ಅಜ್ಜಾವರ: ಬಳಕೆಗಿಲ್ಲ ಶುದ್ಧ ಕುಡಿಯುವ ನೀರಿನ ಘಟಕ

11:07 PM Feb 13, 2020 | Sriram |

ಅಜ್ಜಾವರ: ಬೇಸಗೆ ಕಾಲ ಆರಂಭವಾಗುತ್ತಿದ್ದು, ನೀರಿನ ಅಭಾವದ ಕುರಿತು ಅಧಿಕಾರಿಗಳು ಎಚ್ಚತ್ತುಕೊಂಡ ಲಕ್ಷಣ ಕಾಣುತ್ತಿಲ್ಲ. ಶುದ್ಧ ನೀರಿನ ಘಟಕದ ಕೊಳವೆ ಬಾವಿಯಲ್ಲಿ ನೀರಿದ್ದರೂ ಸಾರ್ವಜನಿಕರಿಗೆ ಪೂರೈಕೆ ಆಗುತ್ತಿಲ್ಲ. ಮೇನಾಲದ ಶುದ್ಧ ನೀರಿನ ಘಟಕ ಆರಂಭಗೊಂಡ ನಾಲ್ಕೇ ದಿನಗಳಲ್ಲಿ ಸ್ಥಗಿತಗೊಂಡಿದೆ.

Advertisement

ಅಜ್ಜಾವರ ಗ್ರಾಮದ ಮೇನಾಲ ಬಸ್‌ ನಿಲ್ದಾಣದ ಸಮೀಪ ಸುಳ್ಯ- ಮಂಡೆಕೋಲು ರಸ್ತೆ ಬದಿಯಲ್ಲಿದೆ ಈ ಶುದ್ಧ ನೀರಿನ ಘಟಕ. ಈ ಭಾಗದಲ್ಲಿ ನಾಮಫ‌ಲಕ ಅಳವಡಿಸಿದ್ದಲ್ಲದೆ, ಘಟಕ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಇದರ ಪ್ರಯೋಜನ ಗ್ರಾಮಸ್ಥರಿಗಿನ್ನೂ ಲಭಿಸಿಲ್ಲ.

ಎರಡು ವಾರಗಳ ಹಿಂದೆ ಶುದ್ಧ ನೀರಿನ ಘಟಕ ಆರಂಭಗೊಂಡು ಜನರ ಬಳಕೆಗೆ ಮುಕ್ತವಾಗಿತ್ತು. ಗ್ರಾಮಸ್ಥರು ನಾಣ್ಯ ಹಾಕಿ ನೀರನ್ನು ಕೊಂಡೊಯ್ಯುತ್ತಿದ್ದರು. ಅನಂತರ ಕಿಡಿಗೇಡಿಗಳು ಶುದ್ಧ ನೀರಿನ ಘಟಕ ಆಪರೇಟ್‌ ಆಗುವ ಯಂತ್ರವನ್ನು ಹಾಳುಗೆಡವಿದ್ದಾರೆ. ಈಗ ಘಟಕದ ಯಂತ್ರಕ್ಕೆ ನಾಣ್ಯ ಹಾಕಿದರೆ ಕೆಳಗಿನ ಭಾಗದಲ್ಲಿ ಹೊರ ಬೀಳುತ್ತದೆ. ನಾಣ್ಯ ಹಾಕುವ ಪಕ್ಕದಲ್ಲಿರುವ ನೀರಿನ ಆಯ್ಕೆಗೆ ಇರುವ ಯಂತ್ರ ಕೆಟ್ಟು ಹೋಗಿದೆ.

ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಿ.ಪಂ. ಯೋಜನೆಯಡಿ ಕೈಗೊಂಡ ಘಟಕಕ್ಕೆ ಇಂದಿಗೂ ಯಂತ್ರೋಪಕರಣಗಳು ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಅಜ್ಜಾವರ-ಮೇನಾಲದ ಶುದ್ಧ ನೀರಿನ ಘಟಕದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ನಿಖರ ಮಾಹಿತಿಯೇ ಇಲ್ಲ. ಅಜ್ಜಾವರ ಗ್ರಾ.ಪಂ. ಪಿಡಿಒ ಜಯಮಾಲಾ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಧಿಕಾರಿಗಳ ಜಾಣ ಮೌನವೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಳಂಬ ಧೋರಣೆ
ಅಜ್ಜಾವರ ಶುದ್ಧ ನೀರಿನ ಘಟಕದ ಆರಂಭಿಕ ತೊಡಕಿಗೆ ಕಾರಣಗಳ ಸರಮಾಲೆಯನ್ನೇ ಮುಂದಿಟ್ಟುಕೊಂಡು ವಿಳಂಬ ಧೋರಣೆ ಅನುಸರಿಸಿದಂತಿದೆ. ಕಳೆದ ವರ್ಷ ನೀರಿನ ಸೋರಿಕೆಯ ಕಾರಣ ಕೊಟ್ಟು ಕಾಲಹರಣ ಮಾಡಿದ್ದರು. ಶುದ್ಧ ನೀರಿನ ಘಟಕದಲ್ಲಿ ನೀರು ಶುದ್ಧೀಕರಿಸಲು ಉಪಯೋಗಿಸುವ ಡ್ರಮ್‌ಗಳಲ್ಲಿ ಬಿರುಕು ಕಾಣಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ತಾಂತ್ರಿಕ ದೋಷ ಸರಿಪಡಿಸಿ ಮತ್ತೆ ಆರಂಭಿಸಲಾಗುವುದು ಎಂದು ಪಿಡಿಒ ಜಯಮಾಲಾ ತಿಳಿಸಿದ್ದರು. ಈ ಹೇಳಿಕೆ ನೀಡಿ ವರ್ಷ ಕಳೆಯುತ್ತಿದೆ. ಆದರೂ ಶುದ್ಧ ನೀರಿನ ಘಟಕಕ್ಕೆ ಮುಕ್ತಿ ಸಿಕ್ಕಿಲ್ಲ.

Advertisement

ಯೋಜನೆ ಹಿನ್ನೆಲೆ
2015-16ನೇ ಸಾಲಿನಲ್ಲಿ ಸರಕಾರ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲು ಸ್ತುವಾರಿಯಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಗ್ರಾ.ಪಂ. ವ್ಯಾಪ್ತಿಯ ಜನಸಂದಣಿ ಪ್ರದೇಶದಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ಯೋಜನೆ ಇದಾಗಿತ್ತು. ಘಟಕದ ಯಂತ್ರಕ್ಕೆ ಒಂದು ರೂ. ನಾಣ್ಯ ಹಾಕಿದರೆ ಆರೇಳು ಲೀಟರ್‌ ಶುದ್ಧ ನೀರು ಸಿಗುತ್ತದೆ. ಪ್ರತಿ ಲೀಟರಿಗೆ 15 ಪೈಸೆ ಖರ್ಚು ಬೀಳುತ್ತದೆ. ಎರಡು ವರ್ಷದ ಅನಂತರ ದರ ಪರಿಷ್ಕರಣೆ ಆಗುತ್ತದೆ. ಘಟಕ ನಿರ್ಮಾಣಕ್ಕೆ ಮಾನದಂಡ ಏನೆಂದರೆ, ಗ್ರಾ.ಪಂ.ನಲ್ಲಿ ನೀರಿನ ಮೂಲ ಇರಬೇಕು ಮತ್ತು 30x 30 ಅಡಿ ಸ್ಥಳವನ್ನು 15 ವರ್ಷ ಖಾಸಗಿ ಕಂಪೆನಿಗೆ ಲೀಸ್‌ ನೀಡಬೇಕು ಎಂಬಿತ್ಯಾದಿ ಷರತ್ತು ವಿಧಿಸಲಾಗಿತ್ತು. ಬೇಸಗೆಯಲ್ಲಿ ಇದು ಪ್ರಯೋಜನಕಾರಿಯೆಂದು ಭಾವಿಸಲಾಗಿತ್ತು.

 ನೀರು ಬರುತ್ತಿಲ್ಲ
ಶುದ್ಧ ನೀರಿನ ಘಟಕ ಆರಂಭವಾದ ನಾಲ್ಕು ದಿನ ಬಳಕೆ ಮಾಡಿದ್ದೇವೆ. ಆನಂತರ ನೀರು ಬರುತ್ತಿಲ್ಲ. ಬೇಸಗೆಯಲ್ಲಿ ಈ ರೀತಿಯಾದರೆ ಸಮಸ್ಯೆ ಎದುರಾಗಬಹುದು.
ಪ್ರೇಮಲತಾ
ಸ್ಥಳೀಯರು

 ವಿಚಾರಿಸುವೆ
ಶುದ್ಧನೀರಿನ ಘಟಕದಲ್ಲಿ ತಾಂತ್ರಿಕ ದೋಷ ಎದುರಾದರೆ ಗ್ರಾ.ಪಂ. ಕ್ರಮಕೈಗೊಳ್ಳಬೇಕು. ಇದರ ಕುರಿತಸಂಬಂಧ ಪಟ್ಟವರಲ್ಲಿ ವಿಚಾರಿಸುವೆ.
-ಭವಾನಿಶಂಕರ್‌
ಇ.ಒ., ತಾ.ಪಂ., ಸುಳ್ಯ

- ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next