Advertisement

ನಿರುಪಯುಕ್ತ ಬಯೋಮೆಟ್ರಿಕ್‌

10:49 AM Jun 18, 2019 | Suhan S |

ಸಿರುಗುಪ್ಪ: ತಾಲೂಕಿನ ಕರೂರು, ಸಿರಿಗೇರಿ, ತಾಳೂರು, ರಾವಿಹಾಳ್‌, ಬಾಗೇವಾಡಿ ಕುರುವಳ್ಳಿ, ಹಚ್ಚೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಜರಾತಿ ನಿರ್ವಹಣೆಗಾಗಿ ಫೇಸ್‌ ರೀಡಿಂಗ್‌ ಬಯೋಮೆಟ್ರಿಕ್‌ ಯಂತ್ರವನ್ನು 2017 ಡಿಸೆಂಬರ್‌ ತಿಂಗಳಲ್ಲಿ ಅಳವಡಿಸಿದ್ದರೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕಾರ್ಯ ನಿರ್ವಹಿಸುತ್ತಿಲ್ಲ.

Advertisement

ಈ ಯಂತ್ರಗಳನ್ನು ಬೆಂಗಳೂರು ಮೂಲದ ಪವನ್‌ ಎಂಟರ್‌ ಪ್ರೈಸಸ್‌ ಕಂಪನಿಯಿಂದ ಪೂರೈಕೆ ಮಾಡಿದ್ದಾರೆ. ರೂ.25,370 ಕೊಟ್ಟು 8 ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರದಿಂದ ಖರೀದಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯವರೆಗೆ ಕೆಲವು ಆರೋಗ್ಯ ಕೇಂದ್ರದಲ್ಲಿ ಫೇಸ್‌ ರೀಡಿಂಗ್‌ ಬಯೋಮೆಟ್ರಿಕ್‌ ಯಂತ್ರ ಅಳವಡಿಸಲಾಗಿದ್ದು, ಅವು ಕಾರ್ಯನಿರ್ವಹಿಸುತ್ತಿಲ್ಲ, ಇನ್ನು ಕೆಲವು ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸದೆ ಅಧಿಕಾರಿಗಳ ಕಪಾಟಿನಲ್ಲಿ ಭದ್ರವಾಗಿವೆ.

ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವ ಉದ್ದೇಶದಿಂದ ಸಿಬ್ಬಂದಿ ಹಾಜರಾತಿ ನಿರ್ವಹಣೆಗಾಗಿ ಫೇಸ್‌ ರೀಡಿಂಗ್‌ ಬಯೋಮೆಟ್ರಿಕ್‌ ಯಂತ್ರಕ್ಕಾಗಿ ಸರ್ಕಾರ ಸಾವಿರಾರು ರೂ. ಖರ್ಚು ಮಾಡಿದೆ.

ಬಾಗೇವಾಡಿ, ಕುರುವಳ್ಳಿಯಲ್ಲಿ ಫೇಸ್‌ ರೀಡಿಂಗ್‌ ಬಯೋಮೆಟ್ರಿಕ್‌ ಯಂತ್ರವನ್ನು ಅಳವಡಿಸಿದ್ದರೂ ಅವು ಯಾವುದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಯಂತ್ರಕ್ಕೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ಈ ಯಂತ್ರ ಇಲ್ಲಿ ಯಾವುದೇ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲವೆಂದು ಇಲ್ಲಿ ಕಾರ್ಯನಿರ್ವಹಿಸುವ ವೈದ್ಯರು ತಿಳಿಸಿದ್ದಾರೆ.

ಹಚ್ಚೊಳ್ಳಿ, ಕರೂರು, ತಾಳೂರು, ಸಿರಿಗೇರಿ, ರಾರಾವಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫೇಸ್‌ ರೀಡಿಂಗ್‌ ಬಯೋಮೆಟ್ರಿಕ್‌ ಯಂತ್ರ ಅಳವಡಿಸಿಲ್ಲ.

Advertisement

ಆದರೆ ಈ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಪ್ರಶ್ನೆ ಮಾಡಿದರೆ ನಮಗೆ ಒಂದು ವರ್ಷದ ಹಿಂದೆ ಫೇಸ್‌ ರೀಡಿಂಗ್‌ ಬಯೋಮೆಟ್ರಿಕ್‌ ಯಂತ್ರ ಅಳವಡಿಸುವಂತೆ ಅಂದಿನ ಜಿಲ್ಲಾ ಆರೋಗ್ಯಾಧಿಕಾರಿ ರಮೇಶ್‌ಬಾಬು ತಿಳಿಸಿದ್ದರಿಂದ ಈ ಬಯೋಮೆಟ್ರಿಕ್‌ ಯಂತ್ರ ಖರೀದಿಸಲಾಗಿತ್ತು.

ಫೇಸ್‌ ರೀಡಿಂಗ್‌ ಬಯೋಮೆಟ್ರಿಕ್‌ ಯಂತ್ರವನ್ನು ಪೂರೈಕೆ ಮಾಡಿದ್ದಾರೆ. ಆದರೆ ಈ ಯಂತ್ರವನ್ನು ಯಾವ ರೀತಿಯಲ್ಲಿ ಬಳಸಬೇಕು ಎನ್ನುವ ಬಗ್ಗೆ 2 ದಿನ ತರಬೇತಿ ನೀಡುವುದಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಈ ಯಂತ್ರವನ್ನು ಯಾವ ರೀತಿ ಬಳಸಬೇಕೆನ್ನುವ ತರಬೇತಿಯನ್ನು ಫೇಸ್‌ ರೀಡಿಂಗ್‌ ಯಂತ್ರ ಪೂರೈಸಿದವರು ನೀಡಿಲ್ಲ. ಆದ್ದರಿಂದ ಸದ್ಯ ಫೇಸ್‌ ರೀಡಿಂಗ್‌ ಬಯೋಮೆಟ್ರಿಕ್‌ ಯಂತ್ರದ ಬಳಕೆ ಮಾಡುತ್ತಿಲ್ಲವೆಂದು ಎಲ್ಲಾ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಇಲಾಖೆಯ ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next