ಶಿವಮೊಗ್ಗ: ಸಣ್ಣ ಕೈಗಾರಿಕೋದ್ಯಮಿಯಾಗಿದ್ದ ಮುರುಗೇಶ್ ನಿರಾಣಿ ಇಂದು ದೊಡ್ಡ ಕೈಗಾರಿಕೋದ್ಯಮಿಯಾಗಿದ್ದಾರೆ. ನಿರಾಣಿ ಪ್ರತಿಭಾವಂತ, ಮುಂದೊಂದು ದಿನ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದು ಹೇಳುವ ಮೂಲಕ ಅವರ ಪ್ರತಿಭೆ ಪ್ರೋತ್ಸಾಹಿಸಿದ್ದೇನೆ. ಆದರೆ ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಅವರ ಪಕ್ಷದಲ್ಲಿರುವ ಗುಂಪುಗಾರಿಕೆ ಮುಚ್ಚಿಹಾಕಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಸಂಬಂಧಿಸಿದ ವಿಚಾರ ನಾನು ಯಾವಾಗಲಾದರೂ ಮಾತನಾಡುತ್ತೇನೆ. ಅದನ್ನು ಕೇಳಲು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಯಾರು. ಏನು ಬೇಕಾದರೂ ಊಹೆ ಮಾಡಬಹುದು. ಹೈಕಮಾಂಡ್ ಇರಲಿ ಲೋ ಕಮಾಂಡ್ ಇರಲಿ. ನನ್ನನ್ನು ಪ್ರಶ್ನೆ ಕೇಳಲು ಸಿದ್ದರಾಮಯ್ಯ ಯಾವನು? ಶಿವಕುಮಾರ್ ಯಾವನು? ಏಕ ವಚನದಲ್ಲೇ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯಗೆ ಮುಸ್ಲಿಮರೇ ಗತಿ: ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಆದರೆ ಕಾಂಗ್ರೆಸ್ಸಿಗರೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಅವರ ಪಕ್ಷವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿಯಿಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಮಾತನಾಡಿ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಮುಂದೆ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ. ಬದಲಿಗೆ ಜಮೀರ್ ಅಹಮದ್ ಕಾಲನ್ನು ಹಿಡಿದು ಚಾಮರಾಜ ಪೇಟೆಯಿಂದ ಚುನಾವಣೆಗೆ ನಿಲ್ಲಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಸ್ಲಿಮರೇ ಗತಿ ಎಂದು ಟೀಕಿಸಿದರು.
ಹೆಚ್ಚಿನ ಅನುದಾನ: ಜಲಶಕ್ತಿ ಅಭಿಯಾನದಲ್ಲಿ ದೇಶದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದೇವೆ. ನರೇಗಾ ಯೋಜನೆಯಲ್ಲಿ 13 ಕೋಟಿ ಮಾನವ ದಿನದ ಗುರಿ ನೀಡಲಾಗಿತ್ತು. ನವೆಂಬರ್ ತಿಂಗಳಲ್ಲೇ ನಾವು ಗುರಿಯನ್ನು ಮೀರಿದ್ದೇವೆ. ಹೀಗಾಗಿ ಪ್ರತಿಯೊಂದು ಕುಟುಂಬಕ್ಕೆ 50 ಮಾನವ ದಿನಗಳನ್ನು ಹೆಚ್ಚು ಮಾಡಿಕೊಟ್ಟಿದ್ದಾರೆ. ಗುರಿ ಮೀರಿದ್ದಕ್ಕೆ ಕೇಂದ್ರದ ಸಚಿವರು 400 ಕೋಟಿ ಹೆಚ್ಚಿನ ಅನುದಾನ ನೀಡಿದ್ದಾರೆ. ರಾಜ್ಯದಲ್ಲಿ ನಾವು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ ಎಂಬುದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತಿದ್ದೇನೆ. ಕಾಂಗ್ರೆಸ್ಸಿಗರಿಗೆ ಬಿಜೆಪಿ ಬಗ್ಗೆ ಸರ್ಕಾರದ ಬಗ್ಗೆ ಟೀಕೆ ಮಾಡಲು ಏನೂ ಇಲ್ಲ. ಹಾಗಾಗಿ ನಾನು ಹಾಗೂ ಯಡಿಯೂರಪ್ಪ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.
ಇದನ್ನೂ ಓದಿ:ಕುಮಾರಣ್ಣೋರು ಇನ್ನೊಂದಪಾ ಸಿಎಂ ಆದ್ರೆ ವಿಜಯೇಂದ್ರಣ್ಣೋರು ಡಿಸಿಎಂ ಆಯ್ತಾರಂತೆ ಹೌದಾ ಹುಲಿಯಾ..
ಪ್ರತಿ ಗ್ರಾಮ ಪಂಚಾಯಿತಿಗೂ ಸೋಲಾರ್ ಅಳವಡಿಸಬೇಕು ಎಂಬುದು ನಮ್ಮ ಉದ್ದೇಶ. ಆದರೆ ಕಾಂಗ್ರೆಸ್ಸಿಗರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಏಜೆನ್ಸಿಗಳನ್ನು ಗುರುತು ಮಾಡಲಾಗಿದೆ. ನಮ್ಮನ್ನು ಮುತ್ತುರತ್ನ ಎಂದು ಕಲ್ಲುಬಂಡೆ ಹೊಗಳಿದ್ದು ಸಮಾಧಾನ ಬಂದಿದೆ. ಕಲ್ಲುಬಂಡೆಯಲ್ಲಿ ಡಿ.ಕೆ.ಶಿವಕುಮಾರ್ ಎಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದರು.