ಕಲಾದಗಿ: ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಅವ್ಯವಸ್ಥೆ ಆಗರವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿಯೇ ದೊಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಹೆಚ್ಚು ಗ್ರಾಮಗಳ ಜನರ ಆರೋಗ್ಯ ಕಾಪಾಡುವ, ಕಾಳಜಿ ವಹಿಸುತ್ತಿರುವ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳ ವಸತಿಗೃಹಗಳು ತುರ್ತು ಚಿಕಿತ್ಸೆಗಾಗಿ ಕಾಯುತ್ತಿವೆ.
ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಗಳ, ಸಹಾಯಕ ಸಿಬ್ಬಂದಿ ವಾಸಕ್ಕಾಗಿ 8 ವಸತಿಗೃಹಗಳಿವೆ. ಇವುಗಳಲ್ಲಿ ಕೆಲವು ವಸತಿ ಗೃಹಗಳು ವಾಸವಿರಲು ಯೋಗ್ಯವಿಲ್ಲ. ಮಹಿಳಾ ವೈದ್ಯಾಧಿಕಾರಿ ಕೊಠಡಿ ಮೇಲ್ಛಾವಣಿ ಕಿತ್ತು ಉದುರುತ್ತಿದೆ. ವಿದ್ಯುತ್ ತಂತಿಗಳು ಕಿತ್ತು ಜೋತು ಬಿದ್ದಿವೆ. ಮೇಲ್ಛಾವಣಿ ಸಿಮೆಂಟ್ ಪದರ ಉದುರಿ ಕಬ್ಬಿಣ ಸರಳುಗಳು ಅಸ್ಥಿ ಪಂಜರದಂತೆ ಕಾಣುತ್ತಿವೆ, ಪಾರ್ಮೆಸ್ಟ್ರಿ ಕ್ವಾಟರ್ಸ್‌ನಲ್ಲಿ ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ. ಎಸ್ ಡಿಸಿ ಮತ್ತು ಎಫ್‌ಡಿಸಿ ಕ್ವಾಟರ್ಸ್ ಗಳ ಛಾವಣಿ ಉದುರುತ್ತಿದ್ದು, ಅಂತಹದರಲ್ಲಿಯೇ ಅನಿವಾರ್ಯವಾಗಿ ಸಿಬ್ಬಂದಿ ವಾಸವಾಗಿದ್ದಾರೆ.
ಮಹಿಳಾ ವೈದ್ಯಾಧಿ ಕಾರಿಯೇ ಇಲ್ಲ: ಈ ಆರೋಗ್ಯ ಕೇಂದ್ರಕ್ಕೆ ಮಹಿಳಾ ವೈದ್ಯಾಧಿಕಾರಿಯೇ ಇಲ್ಲ, 20 ವರ್ಷದಿಂದ ಇಲ್ಲಿನ ಸಾರ್ವಜನಿಕರು ಮಹಿಳಾ ವೈದ್ಯಾಧಿಕಾರಿಯನ್ನು ನೇಮಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಆರೋಗ್ಯ ಚಿಕಿತ್ಸೆಗಾಗಿ ಬರುವ ಮಹಿಳೆಯರು ದೂರದ ಬಾಗಲಕೋಟೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ.
ಕಳೆದ ಒಂದು ವರ್ಷದಿಂದ ಹಲವು ಬಾರಿ ಜಿಪಂ ಸಭೆಯಲ್ಲಿ ಆರೋಗ್ಯ ಕೇಂದ್ರದ ಅವ್ಯವಸ್ಥೆ ಕುರಿತು ಮಾತನಾಡಿದ್ದೇನೆ. ಮುಂದಿನ ಜಿಪಂ ಸಭೆಯಲ್ಲಿ ಕಲಾದಗಿ ಆರೋಗ್ಯ ಕೇಂದ್ರಕ್ಕೆ ಮಹಿಳಾ ವೈದ್ಯಾಧಿಕಾರಿ ನೇಮಿಸಲು ಡಿಎಚ್‌ಒ, ಸಿಇಒ ಅವರಿಗೆ ಒತ್ತಾಯ ಮಾಡುವೆ.
.
ಶೋಭಾ ಬಿರಾದಾರಪಾಟೀಲ,
ಜಿಪಂ ಸದಸ್ಯೆ
ಕಲಾದಗಿ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳ ವಸತಿ ನಿಲಯಗಳು ವಾಸವಿರಲು ಯೋಗ್ಯವಾಗಿಲ್ಲ. ಈ ಕುರಿತು ಜಿಪಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
.
ಬಸುರಾಜ ಕರಿಗೌಡರ,
ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ
ಕೇಂದ್ರ ಕಲಾದಗಿ
ಚಂದ್ರಶೇಖರ ಹಡಪದ