Advertisement

ರಸೆಲ್‌ ಮಾರುಕಟ್ಟೆಯಲ್ಲಿ ಅನಧಿಕೃತ ಮಳಿಗೆಗಳ ತೆರವು

06:30 AM May 05, 2019 | Team Udayavani |

ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿನ ಪಾದಚಾರಿ ಮಾರ್ಗ ಹಾಗೂ ಅನಧಿಕೃತ ಮಳಿಗೆಗಳ ತೆರವು ಕಾರ್ಯವನ್ನು ಬಿಬಿಎಂಪಿ ಮುಂದುವರಿಸಿದ್ದು, ನಗರದ ರಸೆಲ್‌ ಮಾರುಕಟ್ಟೆಯಲ್ಲಿನ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿದೆ.

Advertisement

ನಗರದ ಮಾರುಕಟ್ಟೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಹೈಕೋರ್ಟ್‌ ಆದೇಶಿಸಿದೆ. ಅದರಂತೆ ಮೊದಲಿಗೆ ಕೆ.ಆರ್‌.ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ ಪಾಲಿಕೆಯ ಅಧಿಕಾರಿಗಳು, ಶನಿವಾರ ರಸೆಲ್‌ ಮಾರುಕಟ್ಟೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿದರು.

ಪಾಲಿಕೆಯ ವಿಶೇಷ ಆಯುಕ್ತ ರವೀಂದ್ರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೆಸ್ಕಾಂ, ಜಲಮಂಡಳಿ, ಪೊಲೀಸ್‌ ಇಲಾಖೆ ಸೇರಿದಂತೆ 700 ಸಿಬ್ಬಂದಿ ಹಾಗೂ 70ಕ್ಕೂ ಹೆಚ್ಚು ಮಾರ್ಷಲ್‌ಗ‌ಳನ್ನು ಭಾಗಿಯಾಗಿದ್ದರು. ಅದರಂತೆ ಆರು ಜೆಸಿಬಿ, 8 ಟಿಪ್ಪರ್‌, 12 ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ಆರು ತಂಡಗಳ ಮೂಲಕ ಕಾರ್ಯಾಚರಣೆ ನಡೆಸಿದರು.

ಅದರಂತೆ ರಸೆಲ್‌ ಮಾರುಕಟ್ಟೆ, ಬ್ರಾಡ್‌ ವೇ ರಸ್ತೆ, ನಾಲಾ ಮಾರುಕಟ್ಟೆ, ಬೋಟಿ ಮಾರುಕಟ್ಟೆ, ಶಿವಾಜಿ ರಸ್ತೆ, ಒಪಿಎಚ್‌ ರಸ್ತೆ, ಗುಜರಿ ಮಾರುಕಟ್ಟೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಂಜಾನೆಯಿಂದಲೇ ಕಾರ್ಯಾಚರಣೆ ನಡೆಸಿದರು. ತೆರವು ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆ ಕೆಲ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಸಹಕರಿಸಿದರೆ, ಕೆಲವರು ವಿರೋಧ ವ್ಯಕ್ತಪಡಿಸಿದರು.

ಅಡ್ಡ ಬಂದವರಿಗೆ ಲಾಠಿ ರುಚಿ: ಶಿವಾಜಿನಗರ ಮೀನು ಮಾರುಕಟ್ಟೆಯಲ್ಲಿರುವ ಪಾಲಿಕೆಯ ಹಳೆಯ ಕಟ್ಟಡ ಗೋಡೆಗೆ ಅಂಟಿಕೊಂಡಂತೆ ಅನಧಿಕೃತವಾಗಿ ಐದು ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನು ತೆರವುಗೊಳಿಸುವಂತೆ ರವೀಂದ್ರ ಜೆಸಿಬಿ ಚಾಲಕನಿಗೆ ಹೇಳಿದಾಗ ಸ್ಥಳೀಯ ವ್ಯಾಪಾರಿಗಳು ಜೆಸಿಬಿಗೆ ಅಡ್ಡಬಂದರು. ಈ ವೇಳೆ ಪೊಲೀಸರು ಲಾಠಿ ಬೀಸಿ ಅಡ್ಡಬಂದವರನ್ನು ಚದುರಿಸಿದರು.

Advertisement

ಪಾಲಿಕೆ ಕ್ರಮದ ವಿರುದ್ಧ ಹೋರಾಟ: ಕಳೆದ 15-20 ವರ್ಷಗಳಿಂದ ರಸೆಲ್‌ ಮಾರುಕಟ್ಟೆಯಲ್ಲಿ ಬಳಿ ಕಾರು ಹಾಗೂ ದ್ವಿಚಕ್ರ ಪಾರ್ಕಿಂಗ್‌ ಮಾಡಲಾಗುತ್ತಿದೆ. ಇದೀಗ ಏಕಾಏಕಿ ಅಗ್ನಶಾಮಕ, ಆ್ಯಂಬುಲೆನ್ಸ್‌ ಒಳಬರಲು ತೊಂದರೆಯಾಗುತ್ತದೆ ಎಂದು ವಾಹನ ನಿಲುಗಡೆ ನಿಷೇಧಿಸಿದ್ದಾರೆ.

ಇದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಲಿದೆ. ಹೀಗಾಗಿ ಪಾರ್ಕಿಂಗ್‌ ವ್ಯವಸ್ಥೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಪಾಲಿಕೆಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು ರಸೆಲ್‌ ಮಾರುಕಟ್ಟೆ ಸಂಘದ ಅಧ್ಯಕ್ಷ ಮಹಮ್ಮದ್‌ ಇದ್ರೀಸ್‌ ಚೌದ‌ರಿ ಹೇಳಿದರು.

ಬೆಂಕಿ ಕಂಡು ದಿಕ್ಕಾಪಲಾದ ಜನತೆ: ರಸೆಲ್‌ ಮಾರುಕಟ್ಟೆಯಲ್ಲಿ ಒತ್ತವರಿ ತೆರವು ಕಾರ್ಯಾಚರಣೆಗಾಗಿ ಗ್ಯಾಸ್‌ ಕಟ್ಟರ್‌ ತರಲಾಗಿತ್ತು. ಸಿಲಿಂಡರ್‌ನ ಪೈಪ್‌ ತುದಿಯಲ್ಲಿ ತುಂಡಾಗಿ ನೇತಾಡುತ್ತಿದ್ದನ್ನು ಗಮನಿಸದ ಸಿಬ್ಬಂದಿ ಪೈಪ್‌ನ್ನು ಸಿಲಿಂಡರ್‌ಗೆ ಅಳವಡಿಸಿದಾಗ ಅನಿಲ ಹೊರಬಂದು ಜೋರಾದ ಶಬ್ದದೊಂದಿಗೆ ಪೈಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಬರಿಯಲ್ಲಿ ಸಿಬ್ಬಂದಿಯ ಕೈಯಿಂದ ಬೆಂಕಿಯಿದ್ದ ಪೈಪ್‌ ಕೆಳಗೆ ಬಿದ್ದು ನಿಯಂತ್ರಣವಿಲ್ಲದೆ ಅತ್ತ ಇತ್ತ ಹರಿಯಲಾರಂಬಿಸಿತು. ಈ ವೇಳೆ ಜನರು ದಿಕ್ಕಾಪಾಲಾಗಿ ಓದಿದರು.

ಹೈಕೋರ್ಟ್‌ ಸೂಚನೆಯಂತೆ ರಸೆಲ್‌ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗ್ನಿಶಾಮಕ ವಾಹನ ಒಳಹೋಗಲು ಸಾಧ್ಯವಿಲ್ಲ. ಅದನ್ನು ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಅದರಂತೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಇದಾದ ಬಳಿಕ ಮಡಿವಾಳ ಮಾರುಕಟ್ಟೆ ತೆರವು ನಡೆಯಲಿದೆ.
-ರವೀಂದ್ರ, ಬಿಬಿಎಂಪಿ ವಿಶೇಷ ಆಯುಕ್ತ

ಹೈಕೋರ್ಟ್‌ ನಿರ್ದೇಶನದಂತೆ ಮಾರುಕಟ್ಟೆಗಳಲ್ಲಿನ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದು, ರಸೆಲ್‌ ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸೆಲ್‌ ಮಾರುಕಟ್ಟೆ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿದ್ದು, ಶೀಘ್ರವೇ ಟೆಂಡರ್‌ ಕರೆದು ಮಾರುಕಟ್ಟೆ ನವೀಕರಿಸಲಾಗುವುದು.
-ಎನ್‌.ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next