Advertisement

Vitla: ಮಲೆತ್ತಡ್ಕ ಗೌರಿಮೂಲೆ: ಈಡೇರದ ಸರ್ವಋತು ರಸ್ತೆ ಬೇಡಿಕೆ

12:49 PM Jul 27, 2024 | Team Udayavani |

ವಿಟ್ಲ: ಪುಣಚ ಗ್ರಾಮ ವ್ಯಾಪ್ತಿಗೊಳಪಟ್ಟ ಮಲೆತ್ತಡ್ಕ-ಬರೆಂಗಾಯಿ- ಗೌರಿಮೂಲೆ-ಬಸ್ರಿಮೂಲೆ ಗುಂಡ್ಯಡ್ಕ-ಪದವು ಮೊದಲಾದ ಕಡೆಗಳ ನಾಗರಿಕರು ಬಳಸುವ ಸುಮಾರು 2.5 ಕಿ.ಮೀ ದೂರದ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿ ನಡೆದಾಡಲೂ ಸಾಧ್ಯವಾಗದ ಸ್ಥಿತಿಯಿದೆ.

Advertisement

ದ್ವಿಚಕ್ರ ವಾಹನ ಸ್ಕಿಡ್‌ ಆಗಿ ಅಪಘಾತ ಸಂಭವಿಸುವುದು ಇಲ್ಲಿ ಮಾಮೂಲಿಯಾಗಿದೆ. ಈ ಭಾಗದ ಜನರು ಪ್ರಮುಖ ರಸ್ತೆಯನ್ನು ಸೇರಲು ದಿನಂಪ್ರತಿ ಹರಸಾಹಸ ಪಡುತ್ತಿದ್ದಾರೆ. ಅನುದಾನಕ್ಕಾಗಿ ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ಸಂಪರ್ಕಿಸಿದರೂ ಕಳೆದ 6-7 ವರ್ಷಗಳಿಂದ ಸರ್ವಋತು ರಸ್ತೆ ನಿರ್ಮಾಣ ಮಾಡಲು ಮಾಡಿದ ಪ್ರಯತ್ನಗಳು ಇಂದಿಗೂ ಕೈಗೂಡಲಿಲ್ಲ.

ಚಿಕ್ಕಪುಟ್ಟ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಪ್ರತೀ ವರ್ಷ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಾಗಲು ಕಷ್ಟಪಡುತ್ತಾರೆ. ಗ್ರಾಮದ ಮುಖ್ಯ ಕೇಂದ್ರಕ್ಕೆ ಬರಲು ಎಲ್ಲೆಲ್ಲೋ ಕಾಲುದಾರಿಯನ್ನು ಬಳಸಿ ಹೋಗಬೇಕಾದ ಶೋಚನೀಯ ಸ್ಥಿತಿಯಿದೆ. ಚುನಾವಣೆಯ ಸಂದರ್ಭದಲ್ಲಿ ಆಶ್ವಾಸನೆ, ಭರವಸೆ ನೀಡಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತೆ ಮರೆತುಬಿಡುತ್ತಾರೆ.

ಮಳೆಗಾಲದಲ್ಲಿ ನರಕಸದೃಶ

ಪುಣಚ ಗ್ರಾಮ ಸಡಕ್‌ ರಸ್ತೆಯಿಂದ ಗ್ರಾಮ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಲೆತ್ತಡ್ಕ-ಗೌರಿಮೂಲೆ- ಪದವು ರಸ್ತೆ ಮೇ ತಿಂಗಳಿನಿಂದ ಸೆಪ್ಟೆಂಬರ್‌ ತನಕ ನಿತ್ಯ ಸಂಚಾರಿಗಳಿಗೆ ನಡೆದಾಡಲೂ ಸಾಧ್ಯವಾಗದೇ ನರಕಸದೃಶವಾಗಿರುತ್ತದೆ. ದ್ವಿಚಕ್ರ, ಅಟೋರಿಕ್ಷಾ ಕಾರುಗಳಂತಹ ವಾಹನಗಳೂ ಸಂಚರಿಸಲು ಸಾಧ್ಯವಾಗದ ಸ್ಥಿತಿ ಉದ್ಭವಿಸುತ್ತದೆ. ಜೀಪು, ಪಿಕಪ್‌ ಲಾರಿಗಳಂತಹ ವಾಹನಗಳು ಬಹಳ ಕಷ್ಟಪಟ್ಟು ಒಂದು ಬಾರಿ ಸಂಚರಿಸಿದರೆ ಇತರ ಯಾವುದೇ ವಾಹನಗಳು ಮತ್ತೆ ಆ ರಸ್ತೆಯಲ್ಲಿ ಸಂಚರಿಸಲಾಗುವುದಿಲ್ಲ.

Advertisement

ಪುಣಚ ಗ್ರಾ.ಪಂ.ನಿಂದ ಈ ರಸ್ತೆಗೆ ಹಿಂದೆ ಅನುದಾನ ನೀಡಲಾಗಿದೆ. ಪಂಚಾಯತ್‌ನಲ್ಲಿ ದೊಡ್ಡ ಅನುದಾನ ಇರುವುದಿಲ್ಲ. ಜಾಸ್ತಿ ನೀರು ನಿಲ್ಲುವ ಜಾಗವನ್ನು ಗುರುತಿಸಿ ಜಲ್ಲಿಹುಡಿ ಹಾಕಿಕೊಡಲಾಗಿದೆ. ಲಕ್ಷಗಟ್ಟಲೆ ರೂ. ಅನುದಾನವನ್ನು ಪಂಚಾಯತ್‌ ಹೊಂದಿಸಲು ಕಷ್ಟ. ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
-ರವಿ, ಪಿಡಿಒ, ಪುಣಚ

ಪ್ರಧಾನಿಗೆ ಪತ್ರ
ಇಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಸುಮಾರು 1.25 ಕೋಟಿ ರೂ. ಗಿಂತಲೂ ಅಧಿಕ ವೆಚ್ಚ ಬೇಕಾಗಬಹುದೆಂದು ಅಂದಾಜಿಸಲಾಗಿದ್ದು, ಸ್ಥಳೀಯರು ಪ್ರಧಾನಿ ಕಚೇರಿಗೆ ಸಮಸ್ಯೆಯ ಬಗ್ಗೆ ವಿವರಿಸಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆ ಪತ್ರಕ್ಕೆ ಪ್ರಧಾನಿ ಕಚೇರಿ ಸ್ಪಂದಿಸಿ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ದ.ಕ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಈ ಬಗ್ಗೆ ಕೂಡಲೇ ಪರಿಶೀಲಿಸಿ ವರದಿ ಕೊಡುವಂತೆ ಸೂಚನೆ ನೀಡಿತ್ತು. ಬಂಟ್ವಾಳ ತಾ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮೂಲಕ ರಸ್ತೆ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಯಿತು. ಕಾಂಕ್ರೀಟ್‌ ಕಾಮಗಾರಿ ನಡೆಸುವುದಕ್ಕೆ ಮತ್ತು ಸರ್ವಋತು ರಸ್ತೆಯನ್ನಾಗಿಸುವುದಕ್ಕೆ 1.25 ಕೋ. ವೆಚ್ಚ ತಗಲಬಹುದೆಂದು ಇಲಾಖೆ 2018ರಲ್ಲಿ ವರದಿ ನೀಡಿದೆ. ವರದಿಯ ಬಳಿಕ ಮಾತ್ರ ಯಾವುದೇ ರೀತಿಯ ಪ್ರಗತಿ ಕಾಣಲಿಲ್ಲ.

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next