ಬೆಂಗಳೂರು: ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾದ ಅನಾಹುತದಲ್ಲಿ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ನ್ಯಾಯಾಲಯದ ನಿರ್ದೇಶನದಂತೆ ಪರಿಹಾರ ವಿತರಿಸದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪಚ್ಚನಾಡಿ, ಮಂದಾರ ಪ್ರದೇಶಗಳಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತದ ವಿಚಾರವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಪಾಲಿಕೆ ಸಲ್ಲಿಸಿದ್ದ ವರದಿ ಪರಿಶೀಲಿಸಿದ ನ್ಯಾಯಪೀಠ ಆಯುಕ್ತರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಘಟನೆಯಲ್ಲಿ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ಪರಿಹಾರ ನೀಡಲು ನ್ಯಾಯಾಲಯ ಜ. 21ರಂದು ಆದೇಶಿಸಿದೆ. ಆದರೂ, ಆಯುಕ್ತರು ಪರಿಹಾರ ವಿತರಿಸಿಲ್ಲ. ಪರಿಹಾರ ಪಡೆದುಕೊಳ್ಳಬೇಕಿರುವ ಸಂತ್ರಸ್ತರ ಕುರಿತೂ ಸ್ಪಷ್ಟ ಮಾಹಿತಿ ನೀಡಿಲ್ಲ. ಈ ರೀತಿ ನಡೆದುಕೊಳ್ಳುವುದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಲಕ್ಷ ರೂ. ದಂಡದ ಎಚ್ಚರಿಕೆ
ಇದೇ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ನ್ಯಾಯಪೀಠಕ್ಕೆ ಮಾಹಿತಿ ನೀಡಿ, ಸಂತ್ರಸ್ತರಿಗೆ ಈವರೆಗೂ ಪರಿಹಾರ ನೀಡಿಲ್ಲ. ಪರಿಹಾರ ನೀಡುವ ಕುರಿತು ನಮ್ಮೊಂದಿಗೆ ಚರ್ಚಿಸಿಲ್ಲ ಎಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಪಾಲಿಕೆ ಪರ ವಕೀಲರಿಗೆ ಸೂಚನೆ ನೀಡಿ, ನಿಮ್ಮ ಆಯುಕ್ತರಿಗೆ ಕರೆ ಮಾಡಿ ಇಂದು ಅಥವಾ ನಾಳೆಯೊಳಗೆ ಪರಿಹಾರ ವಿತರಿಸುವ ಕುರಿತು ನಿಲುವು ಪಡೆದು ತಿಳಿಸಿ. ಉದಾಸೀನವಾಗಿ ವರ್ತಿಸಿದರೆ ನ್ಯಾಯಾಲಯ 1 ಲಕ್ಷ ರೂ. ದಂಡ ವಿಧಿಸಲಿದೆ ಎಂದು ಎಚ್ಚರಿಕೆ ನೀಡಿ, ಕೆಲ ಕಾಲ ವಿಚಾರಣೆ ಮುಂದೂಡಿತು.
ಮತ್ತೆ ವಿಚಾರಣೆ ಆರಂಭವಾದಾಗ ಪಾಲಿಕೆ ಪರ ವಕೀಲರು ಪರಿಹಾರ ವಿತರಿಸುವ ಭರವಸೆ ನೀಡಿದರು. ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಘಟನೆಯಲ್ಲಿ 102 ಮಂದಿ ಸಂತ್ರಸ್ತರಿದ್ದು ಪಾಲಿಕೆ ಸಂತ್ರಸ್ತರಿಗೆ ಪರಿಹಾರ ನೀಡಿ ಆ ಕುರಿತ ದಾಖಲೆಗಳನ್ನು ಅರ್ಜಿದಾರರಾದ ಕಾನೂನು ಸೇವಾ ಸಮಿತಿಗೆ ಸಲ್ಲಿಸಲಿ. ಈ ದಾಖಲೆಗಳನ್ನು ಅರ್ಜಿದಾರರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಪರಿಶೀಲಿಸಿ, ಪರಿಹಾರ ನೀಡಿರುವ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ ಎಂದು ನಿರ್ದೇಶಿಸಿತು.