ರಾಯಚೂರು: ಕೋವಿಡ್ ಮೂರನೇ ಅಲೆಯ ನೆಪದಲ್ಲಿ ರಾಜ್ಯಾದ್ಯಂತ ಹೇರಿರುವ ವಾರಾಂತ್ಯ ಕರ್ಫ್ಯೂ ನಿರ್ಧಾರಗಳು ಅವೈಜ್ಞಾನಿಕವಾಗಿದ್ದು, ಸರ್ಕಾರ ಬಡವರ ಜೀವನದ ಜತೆ ಚಲ್ಲಾಟವಾಡುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ಬಡವರಿಗಾಗುವ ತೊಂದರೆಗಳನ್ನು ಪರಿಗಣಿಸದೆ ಕರ್ಫ್ಯೂ ಜಾರಿ ಮಾಡಿ ಬಡವರ ಬದುಕು ಬೀದಿಪಾಲು ಮಾಡುತ್ತಿದೆ. ಕೋವಿಡ್ ತಡೆಗಟ್ಟುವ ನಿರ್ಧಾರಕ್ಕೆ ನಮ್ಮ ಸಹಮತವಿದೆ. ಕೊರೊನಾ ವೈರಾಣು ನಿಯಂತ್ರಣಕ್ಕೆ ಎಲ್ಲಿ ರೆಡ್ ಜೋನ್ ಇದೆ ಅಲ್ಲಿ ಲಾಕ್‌ಡೌನ್ ಮಾಡುವುದಾದರೆ ನಮ್ಮ ಬೆಂಬಲವಿದೆ.
ಆದರೆ ಪೂರ್ವ ಮಾಹಿತಿ ಪಡೆಯದೆ ಸರ್ಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಸಣ್ಣಪುಟ್ಟ ವ್ಯಾಪಾರಿಗಳು, ರೈತರು, ಆಟೋ ರಿûಾ, ದಿನಗೂಲಿ ಆಧಾರದ ಮೇಲೆ ದುಡಿದು ತಿನ್ನುವ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು. ವಾರಾಂತ್ಯ ಮಾತ್ರ ಬಂದ್ ಮಾಡುವುದಾದರೆ ಒಮಿಕ್ರಾನ್ ಶನಿವಾರ ಮತ್ತು ಭಾನುವಾರ ಮಾತ್ರ ಬರುವುದೇ?, ರಾಜ್ಯ ಸರ್ಕಾರದ ಉದ್ದೇಶವೇನು? ಎಂಬುದು ಅರ್ಥವಾಗುತ್ತಿಲ್ಲ.
ರಾಜ್ಯ ಸರ್ಕಾರದ ಕೆಲ ಸಚಿವರು ವಾರಾಂತ್ಯದ ಕರ್ಫ್ಯೂವನ್ನು ಬಹಿರಂಗವಾಗಿಯೇ ವಿರೋ ಧಿಸಿದರು ಲಾಕ್‌ಡೌನ್ ಮಾಡುವದಾದರೆ ಸಂಕಷ್ಟಕ್ಕೆ ಸಿಲುಕುವ ವರ್ತಕರು, ಕಾರ್ಮಿಕರು, ರೈತರಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ನೆರವಿನ ಪ್ಯಾಕೇಜ್ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.