Advertisement

ಅವೈಜ್ಞಾನಿಕ ರಸ್ತೆ ಸರಿಪಡಿಸದಿದ್ರೆ ಗೇಟ್ ಧ್ವಂಸ

03:41 PM Jul 06, 2019 | Team Udayavani |

ಬಂಗಾರಪೇಟೆ: ಪಟ್ಟಣದ ಸಿ.ರಹೀಂ ಗಾರ್ಡನ್‌ ಹಾಗೂ ಬೂದಿಕೋಟೆ ವೃತ್ತದಲ್ಲಿ ರೈಲ್ವೆ ಇಲಾಖೆ ರಾತ್ರೋರಾತ್ರಿ ಅವೈಜ್ಞಾನಿಕವಾಗಿ ರೈಲ್ವೆ ಮಾರ್ಗದ ಪಕ್ಕದಲ್ಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಈದ್ಗಾ ಮೈದಾನದಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಮಂಜೂರಾಗಿದ್ದ 85 ಲಕ್ಷ ರೂ.ನಲ್ಲಿ ಕೈಗೊಳ್ಳಲಾಗಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನ ಬೂದಿಕೋಟೆ ರಸ್ತೆಯ ಮೂಲಕ ಮಾಲೂರು, ಇತರೆ ಗ್ರಾಮಗಳಿಗೆ ಓಡಾಡುವ ಸಾವಿರಾರು ವಾಹನಗಳಿಗೆ ತೊಂದರೆಯಾಗಿದೆ ಎಂದರು.

ಟ್ರಾಫಿಕ್‌ ಜಾಮ್‌: ಪಟ್ಟಣದ ಬೂದಿಕೋಟೆ ವೃತ್ತದಿಂದ ಹುಣಸನಹಳ್ಳಿ ರೈಲ್ವೆ ಗೇಟ್ವರೆಗೂ ಹೆಚ್ಚಾಗಿ ಮುಸ್ಲಿಮರು ವಾಸವಾಗಿದ್ದು, ಕೋಲಾರ ರೈಲ್ವೆ ಮಾರ್ಗದ ಗೇಟನ್ನು ಮುಚ್ಚಿದ್ದರಿಂದ ಈಗ ಗಂಗಮ್ಮಪಾಳ್ಯ ಸುತ್ತುಕೊಂಡು ಬರಬೇಕಿದೆ. ಪ್ರತಿ ದಿನ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿರುವ ಕಾರಣ ವಾಹನ ಸವಾರರು ನೆಮ್ಮದಿಯಿಂದ ಸಂಚರಿಸದಂತಾಗಿದೆ ಎಂದರು.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹುಣಸನಹಳ್ಳಿ ರೈಲ್ವೆ ಮೇಲ್ಸೇತುವೆಯನ್ನು ಆ.15 ರೊಳಗಾಗಿ ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗುವುದು. ಈ ಮೇಲ್ಸೇತುವೆಗೆ ರಾಜ್ಯ ಸರ್ಕಾರವು ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಕೇಂದ್ರದ ಅನುದಾನ ವಿಳಂಬವಾಗಿದ್ದಕ್ಕೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ದೂರಿದರು.

ಕೋಲಾರ ಮಾರ್ಗದ ರೈಲ್ವೆ ಇಲಾಖೆ ನಿರ್ಮಿಸಿರುವ ರಸ್ತೆ ಸರಿಪಡಿಸದಿದ್ದರೇ, ನಾವೇ ಖುದ್ದಾಗಿ ಗೇಟ್ನ್ನು ಕಿತ್ತುಹಾಕಿ ಸವಾರರಿಗೆ ಮುಕ್ತ ಮಾಡಲಾಗುವುದೆಂದು ಎಚ್ಚರಿಸಿದರು. ಬಂಗಾರಪೇಟೆಯಿಂದ ಬೂದಿಕೋಟೆ ರಸ್ತೆಯನ್ನು 40 ಮೀಟರ್‌ ಅಗಲೀಕರಣಗೊಳಿಸಿ ಹೊಸದಾಗಿ ನಿರ್ಮಾಣ ಮಾಡಲು 40 ಕೋಟಿ ರೂ. ಬಿಡುಗಡೆಯಾಗಲಿದ್ದು, ಈ ರಸ್ತೆಯು ತಮಿಳುನಾಡು ಹಾಗೂ ಮಾಲೂರು ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

Advertisement

ಪಟ್ಟಣದ ಈದ್ಗಾ ಮೈದಾನವು ವಿಶಾಲವಾಗಿದ್ದು, ಪ್ರಸ್ತುತ 85 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈ ದರ್ಗಾ ಆವರಣದಲ್ಲಿ ಮೂಲೆ ಮೂಲೆಗೂ ಕಾಂಕ್ರೀಟ್ ಹಾಕಿ ಅಭಿವೃದ್ಧಿಗೊಳಿಸಲಾಗುವುದು. ಅನುದಾನ ಸಾಕಾಗದೇ ಇದ್ದಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಲಾಗುವುದು. ಮುಂದಿನ ಬಕ್ರೀದ್‌ ಹಬ್ಬದ ವೇಳೆಗೆ ಇಲ್ಲಿಯೇ ಎಲ್ಲರೂ ಪ್ರಾರ್ಥನೆ ಮಾಡಬೇಕಾಗಿದೆ ಎಂದು ಹೇಳಿದರು. ಮುಂದಿನ 8 ದಿನದಲ್ಲಿ ಕಾಮಗಾರಿ ಮುಗಿಯಲಿದ್ದು, ಕನಿಷ್ಠ 20 ದಿನ ನೀರು ಹಾಕಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರ ಚಂಬೆ ಮಂಜುನಾಥ್‌ಗೆ ಸೂಚನೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೆಯುಡಿಎ ಮಾಜಿ ಅಧ್ಯಕ್ಷ ಶಂಶುದ್ಧೀನ್‌ ಬಾಬು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎ.ಪಾರ್ಥಸಾರಥಿ, ದರ್ಗಾ ಆಡಳಿತಾಧಿಕಾರಿ ಡಾ.ಸೈಯದ್‌ ತಾಜಾದ್ದೀನ್‌, ಪುರಸಭೆ ಸದಸ್ಯರಾದ ಅರುಣಾಚಲಂ ಮಣಿ, ಷಫಿ, ಸಾದಿಕ್‌ಪಾಷ, ಸುಹೇಲ್, ಗೋವಿಂದಾ, ವೆಂಕಟೇಶ್‌, ರಾಕೇಶ್‌ಗೌಡ, ಕಪಾಲಿ ಶಂಕರ್‌, ರೇಣುಕಾ, ರತ್ನಮ್ಮ ತಿಮ್ಮಯ್ಯ, ವಸಂತರೆಡ್ಡಿ, ಮುಖಂಡರಾದ ಮರಗಲ್ ಜಾವಿದ್‌, ರಂಗರಾಮಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next