ಸಕಲೇಶಪುರ: ಅವೈಜ್ಞಾನಿಕ ಅಭಿವೃದ್ದಿಯಿಂದಾಗಿ ಮಲೆನಾಡಿನಲ್ಲಿ ಹಿಂದೆಂದೂ ಕಾಣದ ತಾಪಮಾನ ಕಂಡು ಬರುತ್ತಿದ್ದು, ಪ್ರಾಣಿ-ಪಕ್ಷಿಗಳು ಸಹ ಬಿಸಿಲಿನ ಧಗೆಯಿಂದ ತತ್ತರಿಸುತ್ತಿದ್ದು ತಾಲೂಕಿನ ಬೈಕೆರೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಡಾನೆಗಳ ಹಿಂಡೊಂದು ನೀರು ಕುಡಿಯಲು ಪೈಪೋಟಿ ನಡೆಸುತ್ತಿರುವ ದೃಶ‍್ಯ ಕಂಡು ಬಂದಿದೆ.
ಕಾಡು ವಿನಾಶದಿಂದ ಮಲೆನಾಡಿನಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಮಿತಿಮೀರಿದ್ದು, ಕಾಡು ಪ್ರಾಣಿಗಳು ಸರಿಯಾದ ನೆಲೆ ಇಲ್ಲದೆ ಪರದಾಡುತ್ತಿವೆ. ಅದರಲ್ಲೂ ನೀರನ್ನು ಅತಿ ಹೆಚ್ಚು ಇಷ್ಟಪಡುವ ಕಾಡಾನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ದೊರಕದೆ ನೀರಿಗಾಗಿ ಹಾತೊರೆಯುತ್ತಿವೆ.
ತಾಲೂಕಿನ ಬೈಕೆರೆ ಗ್ರಾಮದ ಕಾಫಿ ತೋಟವೊಂದರ ಸಣ್ಣ ಕೆರೆಯಲ್ಲಿ ನೀರು ಕುಡಿಯಲು ಕಾಡಾನೆಗಳ ಹಿಂಡೊಂದು ಪೈಪೋಟಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಕೇಂದ್ರೀಯ ವಿವಿ ಪದವೀಧರರಿಗಿಲ್ಲ ಟೀಚರ್ ಭಾಗ್ಯ!
ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನೂರಾರು ಪ್ರತಿಭಟನೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಅವೈಜ್ಞಾನಿಕ ಅಭಿವೃದ್ದಿ ನೀತಿಗಳಿಂದ ರೈತರಿಗೂ ನೆಮ್ಮದಿಯಿಲ್ಲ ಇತ್ತ ಕಾಡು ಪ್ರಾಣಿಗಳಿಗೂ ನೆಮ್ಮದಿಯಿಲ್ಲದಂತಾಗಿದೆ.