ಅರಕಲಗೂಡು: ಪಟ್ಟಣದ ತಾಲೂಕು ಕ್ರೀಡಾಂಗಣವನ್ನು ಅವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿರುವ ಹಿನ್ನೆಲೆ ಮಳೆಗಾಲದಲ್ಲಿ ನೀರು ನಿಂತ್ತು ಕೆರೆಯಾಗಿ ಮಾರ್ಪಟ್ಟಿದೆ ಎಂದು ಕ್ರೀಡಾಸಕ್ತರು ದೂರಿದ್ದಾರೆ.
ಪಟ್ಟಣದ ದೊಡ್ಡಕೆರೆ ಮುಚ್ಚಿ ಕ್ರೀಡಾಂಗಣ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಉದ್ಯಾನವನ ನಿರ್ಮಿಸಲಾಗಿದೆ. ಬಸ್ ನಿಲ್ದಾಣ ಮತ್ತು ಪಾರ್ಕ್ ಸಾರ್ವಜನಿಕರಿಗೆ ಉಪಯೋಗ ವಾಗುತ್ತಿದ್ದು, ಕ್ರೀ ಡಾಂಗಣ ಮಾತ್ರ ಬಳಕೆಯಾಗುತ್ತಿಲ್ಲ ಎಂದು ಕ್ರೀಡಾಸಕ್ತರಾದ ರಾಜು, ಅಣ್ಣೇಗೌಡ ಆರೋಪಿಸಿದ್ದಾರೆ.
1.5 ಕೋಟಿ ರೂ.ವೆಚ್ಚ: 2008-09ನೇ ಸಾಲಿನಲ್ಲಿ ದೊಡ್ಡಕೆರೆ ಒಡೆದು 1.50 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಲಾಗಿದೆ. ಅಲ್ಲದೆ, ಪ್ರತಿವರ್ಷವೂ ಕೂಡ 20ರಿಂದ 30ಲಕ್ಷ ರೂ.ವೆಚ್ಚಮಾಡಿ ವಿವಿಧ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಆದರೆ, ಇಲ್ಲಿಯ ತನಕ ಮಾತ್ರ ಕ್ರೀಡೆಯಲ್ಲಿ ತೊಡಗುವ ವರಿಗೆ ಮತ್ತು ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ. ಕೆರೆಯಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡ ಪರಿಣಾಮ ಪಟ್ಟಣದ ಜನವಸತಿ ಪ್ರದೇಶದ ನೀರು ಮತ್ತು ಮಳೆಗಾಲದ ನೀರು ಕ್ರೀಡಾಂಗಣಕ್ಕೆ ಬರುತ್ತಿರುವುದರಿಂದ ಸದಾ ನೀರಿನಿಂದ ಕೂಡಿರುತ್ತದೆ. ನೀರು ಕ್ರೀಡಾಂಗಣಕ್ಕೆ ಸೇರದಂತ್ತೆ ಸುತ್ತಾ ವೈಜ್ಞಾನಿ ಕವಾಗಿ ಚರಂಡಿ ನಿರ್ಮಿಸಿದ್ದರೇ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಆಪಾದಿಸಿದ್ದಾರೆ.
ದುರಸ್ತಿಗೊಳಿಸಿ: ತಾಲೂಕು ಕ್ರೀಡಾಂಗಣದ ನಿರ್ವಹಣೆಯನ್ನು ಜಿಲ್ಲಾ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ವಹಿಸಿಕೊಡಲಾಗಿದೆ. ಕೇವಲ ಕುಳಿತುಕೊಳ್ಳುವ ಆಸನಗಳನ್ನು ಒಂದು ಕಡೆ ನಿರ್ಮಿಸಲಾಗಿದೆ. ಮುಖ್ಯ ರಸ್ತೆ ಮಟ್ಟದಿಂದ 10ಅಡಿ ಹಾಳದಲ್ಲಿ ಕ್ರೀಡಾಂಗಣ ನಿರ್ಮಿಸಿರುವ ಪರಿಣಾಮ ಮಳೆಗಾಲ ಬಂದರೇ ಕ್ರೀಡಾಂಗಣ ಕೆರೆಯಾಗಿ ಮಾರ್ಪಡುತ್ತದೆ. ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಶಾಸಕರು ಕ್ರೀಡಾಂಗಣದ ಬಳಕೆ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.
ಕ್ರೀಡಾಂಗಣದ ಪಾಳುಬಿದ್ದಿರುವ ಕೊಠಡಿಗಳಲ್ಲಿ ರಾತ್ರಿ ವೇಳೆ ಪುಂಡರುಗಳು ಅಡ್ಡೆಯಾಗಿದ್ದು ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸ ಬೇಕೆಂದು ಅವರು ಆಗ್ರಹಿಸಿದ್ದಾರೆ.