Advertisement
ಮೈತ್ರಿ ಪಕ್ಷದ ಭಾಗವಾಗಿರುವ ಕಾಂಗ್ರೆಸ್‌ಗೆ ತಮ್ಮದೇ ಪಕ್ಷದ ಹದಿಮೂರು ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈ ಹೊಟೇಲ್ ಸೇರಿಕೊಂಡಿದ್ದು, ಕಾಂಗ್ರೆಸ್ ನಾಯಕರ ಕೈಗೆ ಸಿಗದಂತಾಗಿದ್ದಾರೆ. ರಾಮಲಿಂಗಾರೆಡ್ಡಿ ಅವರನ್ನು ಹೊರತು ಪಡಿಸಿದರೆ, ಯಾವ ಶಾಸಕರೂ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಸರ್ಕಾರದ ಭವಿಷ್ಯದ ಬಗ್ಗೆ ಯಾರಿಗೂ ವಿಶ್ವಾಸ ಉಳಿದುಕೊಂಡಂತೆ ಕಾಣುತ್ತಿಲ್ಲ.
Related Articles
Advertisement
ಕೈ ಕೊಟ್ಟ ನಂಬಿಕೆ: ರಾಜೀನಾಮೆ ಸಲ್ಲಿಸಿದ್ದ ಹದಿಮೂರು ಶಾಸಕರಲ್ಲಿ ರಾಮಲಿಂಗಾ ರೆಡ್ಡಿ ಅವರು ಅತೃಪ್ತರ ಗುಂಪು ಸೇರಿಕೊಳ್ಳದೇ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ನಾಯಕರಿಗೆ ಭರವಸೆ ಉಳಿದಿತ್ತು. ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಮಾಡಿ ವಾಪಸ್ ಕರೆಸಿದರೆ, ಅವರೊಂದಿಗೆ ಬೆಂಗಳೂರಿನ ಶಾಸಕರೂ ರಾಜೀನಾಮೆ ವಾಪಸ್ ಪಡೆಯುತ್ತಾರೆಂಬ ನಂಬಿಕೆಯಲ್ಲಿಯೇ ಕಾಂಗ್ರೆಸ್ ನಾಯಕರಿದ್ದರು.
ಆದರೆ, ರಾಮಲಿಂಗಾ ರೆಡ್ಡಿ ಕೂಡ ತಾವು ಪಕ್ಷದಲ್ಲಿಯೇ ಉಳಿಯುವ ಭರವಸೆ ನೀಡಿ, ಉಳಿದವರ ಉಸಾಬರಿ ನನಗೆ ಗೊತ್ತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಸರ್ಕಾರ ರಕ್ಷಿಸುವಷ್ಟು ಅತೃಪ್ತರು ರಾಜೀನಾಮೆ ವಾಪಸ್ ಪಡೆಯುತ್ತಾರೆ ಎನ್ನುವ ನಂಬಿಕೆ ಹೋಗಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಕೇಳಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾವ ಅಸ್ತ್ರ ಪ್ರಯೋಗಿಸುತ್ತಾರೆ ಎನ್ನುವ ಕುತೂಹಲ ಕಾಂಗ್ರೆಸ್ ನಾಯಕರಿಗೂ ಇದ್ದಂತಿದೆ.
ರಿವರ್ಸ್ ಆಪರೇಷನ್ ಅಥವಾ ಗೈರು?: ಇಷ್ಟೊಂದು ಜನ ಶಾಸಕರು ರಾಜೀನಾಮೆ ಸಲ್ಲಿಸಿ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದರೂ, ಮುಖ್ಯಮಂತ್ರಿ ಕುಮಾರಸ್ವಾಮಿ ಧೈರ್ಯದಿಂದ ವಿಶ್ವಾಸ ಮತ ಯಾಚನೆಗೆ ಮುಂದಾಗಿರುವುದು, ಬಿಜೆಪಿ ಶಾಸಕರ ರಿವರ್ಸ್ ಆಪರೇಷನ್ ಅಥವಾ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಯ ಕನಿಷ್ಠ ಐದರಿಂದ ಆರು ಶಾಸಕರನ್ನು ಗೈರು ಹಾಜರಿ ಮಾಡಿಸುವ ಆಲೋಚನೆ ಹೊಂದಿರಬಹುದೆಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
* ಶಂಕರ ಪಾಗೋಜಿ